ದಾಹೋದ್: ಗುಜರಾತ್-ಕೇಡರ್ ನ ಭಾರತೀಯ ಅರಣ್ಯ ಸೇವೆಯ ಅಧಿಕಾರಿಯೊಬ್ಬರು ಶುಕ್ರವಾರ ಬೆಳಗ್ಗೆ ಗುಜರಾತ್‌ನ ದಾಹೋದ್ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಎಫ್‌ಎಸ್ ಅಧಿಕಾರಿ ಆರ್‌ಎಂ ಪರ್ಮಾರ್(56) ಅವರು ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ತಮ್ಮ ನಿವಾಸದಲ್ಲಿ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಹೋದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ದೀಪ್‌ಸಿನ್ಹ್ ಝಾಲಾ ಅವರು ಹೇಳಿದ್ದಾರೆ.
"ಪರ್ಮಾರ್ ತಮ್ಮ ರಿವಾಲ್ವರ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಯಾವುದೇ ಆತ್ಮಹತ್ಯೆ ಟಿಪ್ಪಣಿಯನ್ನು ಬರೆದಿಲ್ಲ. ನಾವು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಮತ್ತು ಆತ್ಮಹತ್ಯೆಗೆ ಕಾರಣಗಳನ್ನು ಕಂಡುಹಿಡಿಯಲು ತನಿಖೆ ಪ್ರಾರಂಭಿಸಿದ್ದೇವೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಪರ್ಮಾರ್ ಅವರು ರೇಂಜ್ ಫಾರೆಸ್ಟ್ ಆಫೀಸರ್ ಆಗಿ ರಾಜ್ಯ ಅರಣ್ಯ ಸೇವೆಗೆ ಸೇರಿದ್ದರು ಮತ್ತು 2022 ರಲ್ಲಿ ಐಎಫ್‌ಎಸ್ ಅಧಿಕಾರಿಯಾಗಿ ಬಡ್ತಿ ಪಡೆದರು. ಪ್ರಸ್ತುತ ಅವರು ದಾಹೋದ್‌ನ ಸಾಮಾಜಿಕ ಅರಣ್ಯ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿಯಾಗಿದ್ದರು.