ಶ್ರೀನಗರ: ಪೊಲೀಸ್ ಮತ್ತು ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡುವ ಕೇಂದ್ರದ ಕ್ರಮಕ್ಕೆ ಕಾಶ್ಮೀರದ ರಾಜಕೀಯ ಪಕ್ಷಗಳು ಶನಿವಾರ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಪ್ರಮುಖ ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ), ಈ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ಜನರನ್ನು "ಅಶಕ್ತಗೊಳಿಸುತ್ತದೆ" ಎಂದು ಹೇಳಿವೆ.
ಕಾಂಗ್ರೆಸ್ ಸಹ ಕೇಂದ್ರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದು "ಪ್ರಜಾಪ್ರಭುತ್ವದ ಕೊಲೆ" ಎಂದು ಟೀಕಿಸಿದೆ. ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಒಗ್ಗಟ್ಟಿನಿಂದ ಪ್ರತಿಭಟಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಜಮ್ಮು ಮತ್ತು ಕಾಶ್ಮೀರದ ಜನರು "ಅಶಕ್ತ, ರಬ್ಬರ್ ಸ್ಟಾಂಪ್" ಮುಖ್ಯಮಂತ್ರಿಗಿಂತ ಹೆಚ್ಚು ಅರ್ಹರು. ಸಿಎಂ, ಒಬ್ಬ ಪ್ಯೂನ್ ನೇಮಕ ಮಾಡಲು ಲೆಫ್ಟಿನೆಂಟ್ ಗವರ್ನರ್ ಮೊರೆ ಹೋಗಬೇಕಾಗುತ್ತದೆ ಎಂದು
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ. ಆದಾಗ್ಯೂ, ಕೇಂದ್ರದ ಈ ಕ್ರಮವು ಶೀಘ್ರದಲ್ಲೇ "ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬ ಸೂಚಕವಾಗಿದೆ" ಎಂದಿದ್ದಾರೆ.