ಭೋಜಶಾಲಾ 
ದೇಶ

Bhojshala-Kamal Maula Mosque dispute; ಭೋಜಶಾಲಾ ಕಮಲ್‌ ಮೌಲಾ ಮಸೀದಿ ಅಲ್ಲ, ದೇಗುಲ: ASI ವರದಿ

ಎಎಸ್‌ಐನ ಅಧಿಕಾರಿ ಹಿಮಾಂಶು ಜೋಶಿ ಅವರು ವರದಿಯನ್ನು ಹೈಕೋರ್ಟ್‌ನ ರಿಜಿಸ್ಟ್ರಿಗೆ ಹಸ್ತಾಂತರಿಸಿದ್ದು, ಹೈಕೋರ್ಟ್‌ ಜುಲೈ 22ರಿಂದ ಇದರ ವಿಚಾರಣೆ ಆರಂಭಿಸಲಿದೆ ಎಂದರು.

ಇಂದೋರ್: ವಿವಾದಿತ ಭೋಜಶಾಲಾ- ಕಮಲ್‌ ಮೌಲಾ ಮಸೀದಿ ಕುರಿತಾದ ವೈಜ್ಞಾನಿಕ ವರದಿಯನ್ನು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಸೋಮವಾರ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠಕ್ಕೆ ಸಲ್ಲಿಸಿದ್ದು, ಇದು ಮಸೀದಿಯಲ್ಲ.. ದೇಗುಲ ಎಂಬ ವರದಿ ನೀಡಿದೆ ಎಂದು ತಿಳಿದುಬಂದಿದೆ.

ಸುಮಾರು 2,000 ಪುಟಗಳ ವರದಿಯ ಪ್ರಕಾರ ಮಸೀದಿಯು ಮೂಲದಲ್ಲಿ ದೇಗುಲವಾಗಿತ್ತು. ಇದಕ್ಕೆ ಪೂರಕವಾಗಿ ಗಣೇಶ ಸೇರಿ ಹಿಂದೂ ದೇವತೆಗಳ ಶಿಲ್ಪಗಳು ಪತ್ತೆಯಾಗಿವೆ ಎಂದು ಹಿಂದೂಗಳ ಪರ ವಕೀಲರು ಹೇಳಿಕೊಂಡಿದ್ದಾರೆ.

ಎಎಸ್‌ಐನ ಅಧಿಕಾರಿ ಹಿಮಾಂಶು ಜೋಶಿ ಅವರು ವರದಿಯನ್ನು ಹೈಕೋರ್ಟ್‌ನ ರಿಜಿಸ್ಟ್ರಿಗೆ ಹಸ್ತಾಂತರಿಸಿದ್ದು, ಹೈಕೋರ್ಟ್‌ ಜುಲೈ 22ರಿಂದ ಇದರ ವಿಚಾರಣೆ ಆರಂಭಿಸಲಿದೆ ಎಂದರು.

ದೇಗುಲ ಎಂಬುದಕ್ಕೆ ನೂರಾರು ಸಾಕ್ಷ್ಯಗಳು

ಭೋಜಶಾಲಾ ಕಮಲ್‌ ಮೌಲಾ ಮಸೀದಿಯ ಈಗಿರುವ ಕಟ್ಟಡಕ್ಕೆ ಬಳಕೆಯಾಗಿರುವ ಕೆಲವು ಅವಶೇಷಗಳು ಮಸೀದಿ ಈ ಹಿಂದೆ ದೇಗುಲವಾಗಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಎಎಸ್‌ಐ ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಮೊದಲಿದ್ದ ಕಟ್ಟಡವು ಪರಮಾರ ರಾಜಮನೆತನ ಆಡಳಿತ ಅವಧಿಗೆ (9 ಮತ್ತು 14ನೇ ಶತಮಾನಗಳು) ಸೇರಿದ್ದಾಗಿದೆ.

ಮಸೀದಿಯ ಗೋಡೆಗಳು ಹೊಸ ನಿರ್ಮಾಣಗಳಾಗಿವೆ. ಇಡೀ ಗೋಡೆ ಒಂದೇ ತೆರನಾಗಿರದೆ ಬೇರೆ ವಸ್ತುಗಳಿಂದ ಮಾಡಲ್ಪಟ್ಟಿದೆ. ಹಿಂದೂ ದೇವತೆಗಳ ಶಾಸನಗಳು ಕೂಡ ಸ್ಥಳದಲ್ಲಿ ಪತ್ತೆಯಾಗಿವೆ. ಸ್ಥಳದಲ್ಲಿ ಗಣೇಶ, ಬ್ರಹ್ಮ, ಭೈರವ, ನರಸಿಂಹ, ವಿಷ್ಣು ಮತ್ತಿತರ ಹಿಂದೂ ದೇವತೆಗಳ 94 ಶಿಲ್ಪಗಳು ಕೂಡ ಪತ್ತೆಯಾಗಿವೆ. ಹಾಗಾಗಿ ಹಿಂದೂಗಳಿಗೆ ಮಾತ್ರವೇ ಪೂಜೆಗೆ ಅವಕಾಶ ಕಲ್ಪಿಸಬೇಕೆಂದು ಎಂದು ವಕೀಲ ಹರಿಶಂಕರ್‌ ಜೈನ್‌ ತಿಳಿಸಿದ್ದಾರೆ.

ಸಂಸ್ಕೃತ ಶಾಸನಗಳನ್ನು ಹಾನಿಗೊಳಿಸಿ, ಅವುಗಳನ್ನು ಮಸೀದಿ ನೆಲ ಮತ್ತು ಗೋಡೆಗಳಿಗೆ ಮರುಬಳಕೆ ಮಾಡಲಾಗಿದೆ. ಈಗಿರುವ ಕಟ್ಟಡದಲ್ಲಿ ಆಗಿನ ಕಾಲದಲ್ಲಿ ಸಾಹಿತ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುದಕ್ಕೆ ಸಾಕ್ಷ್ಯಗಳು ದೊರೆತಿವೆ ಎನ್ನಲಾಗಿದೆ. ಬೆಳ್ಳಿ, ತಾಮ್ರ, ಅಲ್ಯುಮಿನಿಯಂ, ಉಕ್ಕಿನ 31 ನಾಣ್ಯಗಳು ದೊರೆತಿವೆ.

ದೇವ ದೇವತೆಯರ ವಿಗ್ರಹಗಳ ಜತೆಗೆ ಸಿಂಹ, ಆನೆ, ಕುದುರೆ, ಶ್ವಾನ, ಕೋತಿ, ಹಾವು, ಆಮೆ, ಬಾತುಕೋಳಿ ಮತ್ತಿತರ ವಿವಿಧ ಪ್ರಾಣಿಪಕ್ಷಿಗಳ ಕೆತ್ತನೆಗಳೂ ಪತ್ತೆಯಾಗಿವೆ. ಪ್ರಾಕೃತ ಮತ್ತು ಸಂಸ್ಕೃತ ಭಾಷೆಯ ಶಾಸನಗಳೂ ಸಿಕ್ಕಿವೆ. ಶಾಸನದಲ್ಲಿ ಓಂ ನಮಃ ಶಿವಾಯ ಬರಹ, ಶಾಸನದಲ್ಲಿ ಓಂ ಸರಸ್ವತಿಯೇ ನಮಃ ಬರಹ, ಪರಂಪರಾ ಅವಧಿಯ ನಿರ್ಮಾಣ ಶೈಲಿಯ ದೇಗುಲ ಕುರುಹು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಆವರಣದಲ್ಲಿ ತ್ರಿಶೂಲದ ಚಿತ್ರಕಲೆ ಪತ್ತೆಯಾಗಿದ್ದು, ಇದು ಶಿವನ ಆಯುಧ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ವಿಷ್ಣು ಶಿಲ್ಪ ಮತ್ತು ದೇವಾಲಯದ ಅವಶೇಷಗಳು ಪತ್ತೆಯಾಗಿದ್ದು, ಕಂಬಗಳ ಮೇಲಿನ ಕಲೆ ಮತ್ತು ವಾಸ್ತುಶಿಲ್ಪವು ದೇವಾಲಯದ ಭಾಗವಾಗಿದ್ದವು ಎಂದು ಸೂಚಿಸುತ್ತದೆ. ಅಲ್ಲದೆ ವಿವಾದಿತ ಪ್ರದೇಶದ ಆವರಣದಲ್ಲಿ 13-14ನೇ ಶತಮಾನದ ನಾಣ್ಯಗಳು, 94 ಪುರಾತನ ಶಿಲ್ಪಗಳು ಪತ್ತೆಯಾಗಿವೆ ಎನ್ನಲಾಗಿದೆ.

31 ಪುರಾತನ ನಾಣ್ಯಗಳು ಪತ್ತೆ

ಮಾರ್ಚ್ 22ರಂದು ಎಎಸ್‌ಐ ವೈಜ್ಞಾನಿಕ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ವೇಳೆ ಬೆಳ್ಳಿ, ತಾಮ್ರ, ಅಲ್ಯೂಮಿನಿಯಂ, ಉಕ್ಕಿನಿಂದ ತಯಾರಿಸಿದ ಒಟ್ಟು 31 ನಾಣ್ಯಗಳು (Coins) ಪತ್ತೆಯಾಗಿವೆ. ಇವು ಪುರಾತನ ಕಾಲದ ನಾಣ್ಯಗಳಾಗಿವೆ ಎಂದು ವರದಿ ಹೇಳಿದೆ. ಈ ನಾಣ್ಯಗಳು ಇಂಡೋ-ಸಸ್ಸಾನಿಯನ್ (10ನೇ-11ನೇ ಶತಮಾನ), ದೆಹಲಿ ಸುಲ್ತಾನೇಟ್ (13ನೇ-14ನೇ ಶತಮಾನ), ಮಾಲ್ವಾ ಸುಲ್ತಾನೇಟ್ (15ನೇ-16ನೇ ಶತಮಾನ), ಮೊಘಲ್ (16ನೇ-18ನೇ ಶತಮಾನ), ಧಾರ್ ರಾಜ್ಯ (19ನೇ ಶತಮಾನ), ಮತ್ತು ಬ್ರಿಟಿಷ್ (19-20 ನೇ ಶತಮಾನ)‌ ಕಾಲದ ನಾಣ್ಯಗಳು ಎಂಬುದನ್ನು ವರದಿ ತಿಳಿಸಿದೆ.

ಹಿಂದೂಗಳಿಂದ ಅರ್ಜಿ

ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿರುವ ಕಮಲ್‌ ಮೌಲಾ ಮಸೀದಿ ತಮಗೆ ಸೇರಿದ್ದು ಎಂದು ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಮಸೀದಿಯ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಕೈಗೊಳ್ಳುವಂತೆ ಮಾರ್ಚ್ 11ರಂದು ಹೈಕೋರ್ಟ್‌ ಆದೇಶಿಸಿತ್ತು. ಈ ಪ್ರಕ್ರಿಯೆ ಮುಗಿಸಲು ಕೋರ್ಟ್‌ 6 ವಾರಗಳ ಕಾಲಾವಕಾಶ ನೀಡಿತ್ತು. ಆದರೆ ಕಾಲಾವಕಾಶ ವಿಸ್ತರಣೆಗಳ ಬಳಿಕ ಈಗ ಎಎಸ್‌ಐ ತನ್ನ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ. ಹಿಂದೂಗಳು ಭೋಜಶಾಲಾ ಸಂಕೀರ್ಣವನ್ನು ವಾಗ್ದೇವಿ ದೇಗುಲ ಎಂದು ಪರಿಗಣಿಸಿದರೆ, ಮುಸ್ಲಿಮರು ಕಮಲ್‌ ಮೌಲಾ ಮಸೀದಿ ಎಂದು ಕರೆಯುತ್ತಾರೆ.

ವಿಚಾರಣೆಗೆ ಸುಪ್ರೀಂ ಅಸ್ತು

ಏತನ್ಮಧ್ಯೆ ಭೋಜಶಾಲಾ ಕುರಿತಾದ ವೈಜ್ಞಾನಿಕ ಸಮೀಕ್ಷೆಯನ್ನು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. ಭೋಜಶಾಲಾ ಕಮಲ್‌ ಮೌಲಾ ಮಸೀದಿ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೌಲಾನಾ ಕಮಲುದ್ದೀನ್‌ ವೆಲ್ಫೇರ್‌ ಸೊಸೈಟಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT