ಕೇದಾರನಾಥ: ಕೇದಾರನಾಥ ದೇವಾಲಯದಿಂದ 228 ಕೆ.ಜಿ ಚಿನ್ನವನ್ನು ಕಳುವು ಮಾಡಲಾಗಿದೆ ಎಂಬ ಜ್ಯೋತಿಷ್ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಆರೋಪಕ್ಕೆ ಬದರಿ- ಕೇದಾರಾನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ಎಎನ್ಐ ಗೆ ಸಂದರ್ಶನ ನೀಡಿರುವ ಅಜಯ್, ಕೇದಾರನಾಥ್ ಧಾಮ್ ನಿಂದ ಚಿನ್ನ ನಾಪತ್ತೆಯಾಗಿದೆ ಎಂಬ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಆರೋಪ ದುರದೃಷ್ಟಕರವಾದದ್ದು, ಅವರು ವಾಸ್ತವಾಂಶಗಳನ್ನು ಮುಂದಿಡಲಿ ಎಂದು ಹೇಳಿದ್ದಾರೆ.
ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಕೇವಲ ಹೇಳಿಕೆ ನೀಡುವ ಬದಲು ಸಂಬಂಧಪಟ್ಟ ಪ್ರಾಧಿಕಾರವನ್ನು ಸಂಪರ್ಕಿಸಿ, ತಮ್ಮ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಲಿ ಅಥವಾ ಅವರ ಬಳಿ ಸಾಕ್ಷ್ಯಗಳಿದ್ದಲ್ಲಿ ಅವುಗಳನ್ನು ಸುಪ್ರೀಂ ಕೋರ್ಟ್, ಹೈಕೋರ್ಟ್ ಮುಂದಿಡಲಿ ಎಂದು ಅಜಯ್ ಹೇಳಿದ್ದಾರೆ.
ಕೇದಾರನಾಥ ಧಾಮದ ಘನತೆಗೆ ಧಕ್ಕೆ ತರುವ ಹಕ್ಕು ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಇಲ್ಲ ಎಂದು ದೇವಾಲಯ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ. ಸ್ವಾಮಿ ಅವಿಮುಕ್ತೇಶ್ವರಾನಂದರು ರಾಜಕೀಯ ಅಜೆಂಡಾವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದರೆ ಅದು ಅತ್ಯಂತ ದುರದೃಷ್ಟಕರ ಎಂದು ಅಜಯ್ ಹೇಳಿದ್ದಾರೆ.