ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದ ನೇಮಕಾತಿ ಅಭಿಯಾನದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಆಕಾಂಕ್ಷಿಗಳು ಆಗಮಿಸಿದ್ದ ಪರಿಣಾಮ ಕಾಲ್ತುಳಿತದಂತಹ ವಾತಾವರಣ ನಿರ್ಮಾಣವಾಗಿತ್ತು.
ವರದಿಗಳ ಪ್ರಕಾರ, 2,216 ಹುದ್ದೆಗಳಿಗೆ 25 ಸಾವಿರ ಮಂದಿ ಆಕಾಂಕ್ಷಿಗಳು ಆಗಮಿಸಿದ್ದರು. ಇಷ್ಟು ಪ್ರಮಾಣದಲ್ಲಿ ಬಂದಿದ್ದ ನೌಕರಿ ಆಕಾಂಕ್ಷಿಗಳನ್ನು ನಿಭಾಯಿಸುವುದಕ್ಕಾಗಿ ಏರ್ ಇಂಡಿಯಾ ಏರ್ಪೋರ್ಟ್ ಸರ್ವೀಸಸ್ ಲಿಮಿಟೆಡ್ ಹರಸಾಹಸ ಮಾಡಬೇಕಾಯಿತು.
ಏರ್ ಇಂಡಿಯಾ ಏರ್ಪೋರ್ಟ್ ಸರ್ವೀಸಸ್ ಲಿಮಿಟೆಡ್ ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ನಿರ್ವಹಣೆ ಸೇವೆಗಳನ್ನು ಒದಗಿಸುತ್ತದೆ.
ಫಾರ್ಮ್ ಕೌಂಟರ್‌ಗಳನ್ನು ತಲುಪಲು ಅರ್ಜಿದಾರರು ಪರಸ್ಪರ ಜಗಳವಾಡುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಅರ್ಜಿದಾರರು ಆಹಾರ ಮತ್ತು ನೀರಿಲ್ಲದೆ ಗಂಟೆಗಳ ಕಾಲ ಕಾಯಬೇಕಾಯಿತು ಮತ್ತು ಅವರಲ್ಲಿ ಹಲವರು ಅಸ್ವಸ್ಥರಾಗಲು ಪ್ರಾರಂಭಿಸಿದರು.
ಏರ್‌ಪೋರ್ಟ್ ಲೋಡರ್‌ಗಳ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ವಿಮಾನದಲ್ಲಿ ಪದಾರ್ಥಗಳನ್ನು ಲೋಡ್ ಮಾಡುವುದು ಮತ್ತು ಇಳಿಸುವುದು ಮತ್ತು ಬ್ಯಾಗೇಜ್ ಬೆಲ್ಟ್‌ಗಳು ಮತ್ತು ರಾಂಪ್ ಟ್ರಾಕ್ಟರುಗಳನ್ನು ನಿರ್ವಹಿಸುವ ಕಾರ್ಯವನ್ನು ಏರ್ ಪೋರ್ಟ್ ಲೋಡರ್ ಗಳು ನಿರ್ವಹಿಸುತ್ತಾರೆ. ಪ್ರತಿ ವಿಮಾನಕ್ಕೆ ಪದಾರ್ಥಗಳು, ಸರಕು ಮತ್ತು ಆಹಾರ ಸರಬರಾಜುಗಳನ್ನು ನಿರ್ವಹಿಸಲು ಕನಿಷ್ಠ ಐದು ಲೋಡರ್‌ಗಳ ಅಗತ್ಯವಿದೆ.
ಏರ್‌ಪೋರ್ಟ್ ಲೋಡರ್‌ಗಳ ವೇತನ ಮಾಸಿಕ ₹ 20,000 ರಿಂದ ₹ 25,000 ರ ನಡುವೆ ಇರುತ್ತದೆ, ಆದರೆ ಹೆಚ್ಚಿನವರು ಓವರ್‌ಟೈಮ್ ಭತ್ಯೆ ಪಡೆದು ₹ 30,000 ಕ್ಕಿಂತ ಹೆಚ್ಚು ಗಳಿಸುತ್ತಾರೆ. ಉದ್ಯೋಗಕ್ಕೆ ಮೂಲಭೂತ ಶೈಕ್ಷಣಿಕ ಮಾನದಂಡಗಳಿದ್ದು, ಅಭ್ಯರ್ಥಿಯು ದೈಹಿಕವಾಗಿ ಬಲವಾಗಿರಬೇಕು ಎಂದು ಎನ್ ಡಿಟಿವಿ ಹೇಳಿದೆ.
ಇತ್ತೀಚೆಗೆ ಗುಜರಾತಿನ ಭರೂಚ್ ಜಿಲ್ಲೆಯ ಅಂಕಲೇಶ್ವರದಲ್ಲಿ 40 ಖಾಲಿ ಹುದ್ದೆಗಳಿಗಾಗಿ ಸಂಸ್ಥೆಯೊಂದು ನಡೆಸಿದ ವಾಕ್-ಇನ್ ಸಂದರ್ಶನಕ್ಕೆ ಸುಮಾರು 1,800ಕ್ಕೂ ಹೆಚ್ಚು ಜನರು ಬಂದು ನೂಕುನುಗ್ಗಲು ರೀತಿಯ ಪರಿಸ್ಥಿತಿ ಎದುರಾಗಿತ್ತು. ನೂಕುನುಗ್ಗಲ ಪರಿಣಾಮ ರ್ಯಾಂಪ್ (ರೇಲಿಂಗ್) ಕುಸಿದುಬಿದ್ದಿತ್ತು.