ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಪ್ರದೇಶ: ಬಿಜೆಪಿಯಲ್ಲಿ ಆಂತರಿಕ ಬೇಗುದಿ; ಪ್ರಧಾನಿ ಭೇಟಿಯಾದ ಪಕ್ಷದ ರಾಜ್ಯಾಧ್ಯಕ್ಷ ಚೌಧರಿ

ಲೋಕಸಭೆ ಚುನಾವಣೆಯಲ್ಲಿ ಸೋತವರು ಸೇರಿದಂತೆ ರಾಜ್ಯದ ಹಲವಾರು ಬಿಜೆಪಿ ನಾಯಕರು ಮುಖ್ಯಮಂತ್ರಿಯವರ ಕಾರ್ಯಶೈಲಿಯನ್ನು ಟೀಕಿಸುತ್ತಿದ್ದಾರೆ.

ನವದೆಹಲಿ: ಲೋಕಸಭೆ ಚುನಾವಣೆ ಬಳಿಕ ಉತ್ತರ ಪ್ರದೇಶ ಬಿಜೆಪಿ ಆತಂರಿಕ ಬೇಗುದಿಯಲ್ಲಿ ಬೇಯುತ್ತಿದ್ದು, ಪಕ್ಷದ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ರಾಜಕೀಯವಾಗಿ ನಿರ್ಣಾಯಕವಾದ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಿನ್ನಮತದ ಅಲೆ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ಇಂದು ಸಂಜೆ ರಾಜ್ಯಪಾಲರಾದ ರಾಜಭವನದಲ್ಲಿ ಭೇಟಿಯಾಗಿದ್ದಾರೆ. ಈ ಭೇಟಿ ಕುರಿತು ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ರಾಜ್ಯಪಾಲರೊಂದಿಗೆ ಸಿಎಂ ಯೋಗಿ ಆದಿತ್ಯನಾಥ್

ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಆಘಾತಕಾರಿ ಸೋಲನ್ನು ಅನುಭವಿಸಿದ ನಂತರ ಪಕ್ಷದೊಳಗೆ ಅಪಸ್ವರದ ಧ್ವನಿಗಳು ಕೇಳಿಬರುತ್ತಿರುವಂತೆಯೇ ಚೌಧರಿ ಮತ್ತು ರಾಜ್ಯದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮೌರ್ಯ ಭಿನ್ನಾಭಿಪ್ರಾಯ ಹೊಂದಿರುವುದು ಪಕ್ಷದೊಳಗೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿದೆ.

ಸರ್ಕಾರಕ್ಕಿಂತ ಸಂಘಟನೆ ದೊಡ್ಡದು ಮತ್ತು ಸಂಘಟನೆಗಿಂತ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ ಎಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚೌಧರಿ ಆಡಿರುವ ಮಾತುಗಳು ಯೋಗಿ ಆದಿತ್ಯನಾಥ್ ಅವರಿಗೆ ತಲುಪಿಸಿರುವ ಸಂದೇಶವಾಗಿದೆ ಎಂದು ಅನೇಕ ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ. ಆದಿತ್ಯನಾಥ್ ಮತ್ತು ನಡ್ಡಾ ಅವರ ಸಮ್ಮುಖದಲ್ಲಿಯೇ ಈ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಚುನಾವಣಾ ಹಿನ್ನಡೆಗೆ "ಅತಿಯಾದ ಆತ್ಮವಿಶ್ವಾಸ ಕಾರಣ ಎಂದು ಯೋಗಿ ಆದಿತ್ಯನಾಥ್ ದೂಷಿಸಿದ್ದಾರೆ. ಅಲ್ಲದೇ ಪ್ರತಿಪಕ್ಷ INDIA ಮೈತ್ರಿಕೂಟದ ಪ್ರಚಾರಕ್ಕೆ ಪರಿಣಾಮಕಾರಿಯಾಗಿ ತಾವು ಪ್ರಚಾರ ಮಾಡಲಿಲ್ಲ ಎಂದಿದ್ದಾರೆ.

ಪಕ್ಷದ ವರಿಷ್ಠರು ಮೌರ್ಯ ಮತ್ತು ಚೌಧರಿ ಅವರೊಂದಿಗೆ ಮಾತನಾಡುವುದರೊಂದಿಗೆ ಭಿನ್ನಮತವನ್ನು ಪರಿಗಣಿಸಿದ್ದು, 2014ರ ಚುನಾವಣೆಯಿಂದಲೂ ಬಿಜೆಪಿ ಬೆಳೆಯುವಲ್ಲಿ ಪ್ರಮುಖವಾಗಿದ್ದ ರಾಜ್ಯದಲ್ಲಿ ಮತ್ತೆ ಚೇತರಿಕೆ ಕಂಡಿರುವ ವಿಪಕ್ಷಗಳ ವಿರುದ್ಧವಾಗಿ ಪಕ್ಷವನ್ನು ಸಂಘಟಿಸಲು ಕ್ರಮ ಕೈಗೊಳ್ಳಲು ಎದುರು ನೋಡುತ್ತಿದ್ದಾರೆ. ಸರ್ಕಾರಕ್ಕಿಂತ ಸಂಘಟನೆ ದೊಡ್ಡದು ಎಂದು ಕೇಶವ್ ಪ್ರಸಾದ್ ಇಂದು ಕೂಡಾ ತಮ್ಮ ಕಚೇರಿಯ ಎಕ್ಸ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಸೋತವರು ಸೇರಿದಂತೆ ರಾಜ್ಯದ ಹಲವಾರು ಬಿಜೆಪಿ ನಾಯಕರು ಮುಖ್ಯಮಂತ್ರಿಯವರ ಕಾರ್ಯಶೈಲಿಯನ್ನು ಟೀಕಿಸುತ್ತಿದ್ದಾರೆ. ಆದಾಗ್ಯೂ, ಆದಿತ್ಯನಾಥ್ ಅವರ ಹಿಂದುತ್ವದ ಅಜೆಂಡಾ, ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಟ್ಟಿಯಾದ ಹಿಡಿತ ಉಳಿಸಿಕೊಂಡಿರುವ ಜನಪ್ರಿಯ ಮುಖ್ಯಮಂತ್ರಿಯಾಗಿರುವುದಾಗಿ ಅವರ ಬೆಂಬಲಿಗರು ಹೇಳುತ್ತಿದ್ದಾರೆ. ರಾಜ್ಯದ ಹಲವಾರು ನಾಯಕರ ಹೇಳಿಕೆಗಳು ಶಿಸ್ತಿನ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿವೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಒಪ್ಪಿಕೊಂಡಿದ್ದಾರೆ.

ರಾಜ್ಯದಲ್ಲಿ 10 ಸ್ಥಾನಗಳಿಗೆ ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಉತ್ತಮ ಸಾಧನೆ ತೋರುವುದು ಅವರ ಪ್ರಮುಖ ಆದ್ಯತೆಯಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಚುನಾವಣಾ ಆಯೋಗ ಶೀಘ್ರದಲ್ಲೇ ಚುನಾವಣೆ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ, ರಾಜ್ಯದ 80 ಲೋಕಸಭಾ ಸ್ಥಾನಗಳ ಪೈಕಿ SP ಮತ್ತು ಕಾಂಗ್ರೆಸ್‌ನ ಭಾರತ ಮೈತ್ರಿಕೂಟವು 43 ಸ್ಥಾನಗಳನ್ನು ಗೆದ್ದಿತ್ತು, ಆದರೆ ಬಿಜೆಪಿ ನೇತೃತ್ವದ NDA 36 ರಲ್ಲಿ ಗೆಲುವು ಸಾಧಿಸಿತ್ತು. NDA 2019 ರಲ್ಲಿ 64 ಸ್ಥಾನಗಳನ್ನು ಗೆದ್ದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT