ನವದೆಹಲಿ: ರಷ್ಯಾದ ಸೇನೆಯಿಂದ ಬಿಡುಗಡೆಯಾಗಲು ಬಯಸಿರುವ ಕನಿಷ್ಠ 50 ಭಾರತೀಯ ಪ್ರಜೆಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.
"ಪ್ರಧಾನಿ ಮೋದಿ ಅವರು ಇತ್ತೀಚಿನ ರಷ್ಯಾ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷ ಪುಟಿನ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ನಮ್ಮ ಮನವಿಗೆ ರಷ್ಯಾದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಉಭಯ ದೇಶಗಳು ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಶ್ರಮಿಸುತ್ತಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಷ್ಯಾ ಸೇವೆಯಿಂದ ಬಿಡುಗಡೆಯಾಗಲು ಬಯಸುವ 50 ಭಾರತೀಯ ಪ್ರಜೆಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಕುಟುಂಬಸ್ಥರು ಕೂಡಾ ನಮ್ಮನ್ನು ಭೇಟಿಯಾಗಿದ್ದಾರೆ. ಈ ನಿರ್ದಿಷ್ಟ ಸಮಸ್ಯೆಯನ್ನು ನಾಯಕತ್ವದ ಮಟ್ಟ ಸೇರಿದಂತೆ ಎಲ್ಲಾ ಹಂತಗಳಲ್ಲಿ ಎತ್ತಿದ್ದೇವೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಇತ್ತೀಚಿಗೆ ರಷ್ಯಾದ ಅಧ್ಯಕ್ಷರೊಂದಿಗಿನ ಭೇಟಿಯ ಸಂದರ್ಭದಲ್ಲಿ ರಷ್ಯಾ ಸೇನೆಯಲ್ಲಿ ಭಾರತೀಯ ನಾಗರಿಕ ರ ನೇಮಕಾತಿ ವಿಷಯ ಕುರಿತು ಬಲವಾದ ನಿಲುವು ತಳೆದಿದ್ದರು. ರಷ್ಯಾ ಕೂಡಾ ಭಾರತೀಯರನ್ನು ಶೀಘ್ರದಲ್ಲಿಯೇ ಸೇನೆಯಿಂದ ಬಿಡುಗಡೆ ಮಾಡುವುದಾಗಿ ಹೇಳಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಕಳೆದ ವಾರ ಹೇಳಿದ್ದರು.