ನವದೆಹಲಿ: ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ವಿವಿಧ ಭೂ ಮಾರ್ಗದ ಮೂಲಕ ಒಟ್ಟು 778 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶನಿವಾರ ತಿಳಿಸಿದೆ. ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿರೋಧಿಸಿ ನೆರೆಯ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರಿಗಳು ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿವೆ. ಇದುವರೆಗೆ 778 ಭಾರತೀಯ ವಿದ್ಯಾರ್ಥಿಗಳು ವಿವಿಧ ಭೂ ಮಾರ್ಗದ ಮೂಲಕ ಭಾರತಕ್ಕೆ ಮರಳಿದ್ದಾರೆ. ಜೊತೆಗೆ ಸುಮಾರು 200 ವಿದ್ಯಾರ್ಥಿಗಳು ಢಾಕಾ ಮತ್ತು ಚಿತ್ತಗಾಂಗ್ ವಿಮಾನ ನಿಲ್ದಾಣಗಳ ಮೂಲಕ ಮನೆಗೆ ಮರಳಿದ್ದಾರೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಶೇಖ್ ಹಸೀನಾ ನೇತೃತ್ವದ ಸರ್ಕಾರವು ವಿವಾದಾತ್ಮಕ ಉದ್ಯೋಗ ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ವಿದ್ಯಾರ್ಥಿಗಳು ಒತ್ತಾಯಿಸಿ ಬಾಂಗ್ಲಾದೇಶವು ಮಾರಣಾಂತಿಕ ಘರ್ಷಣೆಗೆ ಒಳಗಾಗುತ್ತಿದೆ. ವಾರದ ಹಿಂದೆ ಆರಂಭವಾದ ಘರ್ಷಣೆಯಲ್ಲಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಬಾಂಗ್ಲಾದೇಶದಲ್ಲಿರುವ ಒಟ್ಟು ಭಾರತೀಯ ಪ್ರಜೆಗಳ ಸಂಖ್ಯೆ ಸುಮಾರು 15,000 ಎಂದು ಅಂದಾಜಿಸಲಾಗಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ಹೇಳಿದ್ದಾರೆ. ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಮತ್ತು ಚಿತ್ತಗಾಂಗ್, ರಾಜ್‌ಶಾಹಿ, ಸಿಲ್ಹೆಟ್ ಮತ್ತು ಖುಲ್ನಾದಲ್ಲಿನ ಸಹಾಯಕ ಹೈಕಮಿಷನ್‌ಗಳು ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ವಾಪಸ್ ಕರೆತರಲು ಸಹಾಯ ಮಾಡುತ್ತಿವೆ ಎಂದು MEA ಹೇಳಿದೆ.