ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವು ನಾಳೆ ಜುಲೈ 22 ರಂದು ಆರಂಭವಾಗಿ ಆಗಸ್ಟ್ 12 ರವರೆಗೆ 19 ಅಧಿವೇಶನಗಳೊಂದಿಗೆ ಕೊನೆಯಾಗಲಿದೆ. ಅದಕ್ಕೂ ಮುನ್ನ ಇಂದು ಕೇಂದ್ರ ಸರ್ಕಾರ ದೆಹಲಿಯಲ್ಲಿ ಸರ್ವಪಕ್ಷ ಸಭೆ ಕರೆದಿದ್ದು, ಸರ್ಕಾರದ ಮಂತ್ರಿಮಂಡಲದ ಸಚಿವರು ಸಭೆಗೆ ಆಗಮಿಸಿದ್ದಾರೆ. ಕಳೆದ ಬಾರಿ ಸದನದಲ್ಲಿ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಇಂದು ಸಭೆಗೆ ಹಾಜರಾಗುತ್ತಿದ್ದಾರೆ.
ಟಿಎಂಸಿ ಗೈರು: ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಂಸದರು ಇಂದಿನ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲಿದ್ದು, ತೃಣಮೂಲ ಕಾಂಗ್ರೆಸ್ (TMC) ಸದಸ್ಯರು ಮಾತ್ರ ಇಂದು ಜುಲೈ 21 ರಂದು ಹುತಾತ್ಮರ ದಿನ ಎಂದು ಸಭೆಗೆ ಹಾಜರಾಗುವುದಿಲ್ಲ ಎಂದು ತಿಳಿಸಿದೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಮತ್ತು ಕೇಂದ್ರ ಸಚಿವ ಮತ್ತು ಎಲ್ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಆಗಮಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸರ್ಕಾರದ ಅಭಿಪ್ರಾಯವನ್ನು ಮಂಡಿಸಲಿದ್ದಾರೆ.
ಕಾಂಗ್ರೆಸ್‌ನ ಜೈರಾಮ್ ರಮೇಶ್ ಮತ್ತು ಕೆ ಸುರೇಶ್, ಎಐಎಂಐಎಂನ ಅಸಾದುದ್ದೀನ್ ಓವೈಸಿ, ಆರ್‌ಜೆಡಿಯ ಅಭಯ್ ಕುಶ್ವಾಹ, ಜೆಡಿಯು ಸಂಜಯ್ ಝಾ, ಎಎಪಿಯ ಸಂಜಯ್ ಸಿಂಗ್, ಎಸ್‌ಪಿ ನಾಯಕ ರಾಮ್‌ಗೋಪಾಲ್ ಯಾದವ್ ಮತ್ತು ಎನ್‌ಸಿಪಿಯ ಪ್ರಫುಲ್ ಪಟೇಲ್ ಸಾಂಪ್ರದಾಯಿಕ ಸಭೆಯಲ್ಲಿ ಹಾಜರಿದ್ದರು.
1993 ರಲ್ಲಿ ಕೋಲ್ಕತ್ತಾ ಪೊಲೀಸ್ ಗುಂಡಿನ ಘಟನೆಯ ಸಂದರ್ಭದಲ್ಲಿ ದುರಂತವಾಗಿ ಮೃತಪಟ್ಟ 13 ಕಾಂಗ್ರೆಸ್ ಬೆಂಬಲಿಗರ ನೆನಪಿಗಾಗಿ ಹುತಾತ್ಮರ ದಿನವೆಂದು ಪಶ್ಚಿಮ ಬಂಗಾಳದಲ್ಲಿ ಆಚರಿಸಲಾಗುತ್ತದೆ.
ಅಂದು ಪಶ್ಚಿಮ ಬಂಗಾಳದ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರದ ಅಡಿಯಲ್ಲಿ ರಾಜ್ಯ ಕಾರ್ಯದರ್ಶಿ, ರೈಟರ್ಸ್ ಬಿಲ್ಡಿಂಗ್ಸ್‌ಗೆ ನಡೆದ ಮೆರವಣಿಗೆ ಸಂದರ್ಭದಲ್ಲಿ 13 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ದಾಳಿಯಲ್ಲಿ ಮೃತರಾಗಿದ್ದರು.
ಜುಲೈ 23ಕ್ಕೆ ಕೇಂದ್ರ ಬಜೆಟ್ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿವೇಶನದ ಮೊದಲ ದಿನವೇ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ನಾಳೆ ಅವರು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಸಹ ಮಂಡಿಸಲಿದ್ದಾರೆ.
90 ವರ್ಷಗಳಷ್ಟು ಹಳೆಯದಾದ ಏರ್‌ಕ್ರಾಫ್ಟ್ ಆಕ್ಟ್ ನ್ನು ಬದಲಿಸುವುದು ಸೇರಿದಂತೆ ಆರು ಮಸೂದೆಗಳನ್ನು ಸರ್ಕಾರವು ಮಂಡಿಸುವ ನಿರೀಕ್ಷೆಯಿದೆ. ಕೇಂದ್ರದ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಬಜೆಟ್‌ಗೆ ಸಂಸತ್ತಿನ ಅನುಮೋದನೆಯನ್ನು ಪಡೆಯುತ್ತದೆ.
ಒಡಿಶಾದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ನವೀನ್ ಪಟ್ನಾಯಕ್ ಒಡಿಶಾಗೆ ವಿಶೇಷ ವರ್ಗದ ಸ್ಥಾನಮಾನದ ಬೇಡಿಕೆಯನ್ನು ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳುವಂತೆ ತಮ್ಮ ಪಕ್ಷದ ಸಂಸದರನ್ನು ಕೇಳಿಕೊಂಡಿದ್ದಾರೆ.