ನವದೆಹಲಿ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕನ್ವರ್ ಯಾತ್ರೆಗಾಗಿ ಯೋಗಿ ಆದಿತ್ಯಾನಾಥ್ ಸರ್ಕಾರ ಜಾರಿಗೆ ತಂದಿರುವ ''ನಾಮಫಲಕ ಪ್ರದರ್ಶನ'' ನಿಯಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವಂತೆಯೇ ಯೋಗಿ ಸರ್ಕಾರದ ನಡೆಗೆ ಪತ್ರಕರ್ತೆ ರುಬಿಕಾ ಲಿಯಾಕತ್ ಬೆಂಬಲ ಸೂಚಿಸಿದ್ದಾರೆ.
ಕನ್ವರ್ ಮಾರ್ಗದಲ್ಲಿರುವ ಢಾಬಾಗಳು, ಅಂಗಡಿಗಳು ಅಥವಾ ಬಂಡಿಗಳ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ ಆದೇಶಿಸಿದ್ದಾರೆ. ಕನ್ವರ್ ಯಾತ್ರೆಯ ಸಮಯದಲ್ಲಿ ಯಾವ ಶಿವಭಕ್ತರೂ ಈರುಳ್ಳಿ, ಮಾಂಸಾಹಾರವನ್ನು ತಿನ್ನುವುದಿಲ್ಲ. ಹೀಗಾಗಿ ಹೋಟೆಲ್ ಮತ್ತು ಧಾಬಾ ನಡೆಸುತ್ತಿರುವವರು ವ್ಯಕ್ತಿಯ ಹೆಸರನ್ನು ಸ್ಪಷ್ಟವಾಗಿ ಬರೆಯಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಯೋಗಿ ಸರ್ಕಾರದ ಬೆನ್ನಿಗೆ ನಿಂತ ಪತ್ರಕರ್ತೆ
ಇನ್ನು ಉತ್ತರ ಪ್ರದೇಶ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಮಿತ್ರಪಕ್ಷಗಳೇ ವಿರೋಧ ವ್ಯಕ್ತಪಡಿಸುತ್ತಿದ್ದು, ಚಿರಾಗ್ ಪಾಸ್ವನ್ ಯೋಗಿ ನಿರ್ಧಾರಕ್ಕೆ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇತ್ತ ಪತ್ರಕರ್ತೆ ರುಬಿಕಾ ಲಿಯಾಕತ್ ಮಾತ್ರ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರುಬಿಕಾ, 'ಈ ಕಾನೂನನ್ನು 2006ರಲ್ಲಿ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಮಾಡಲಾಗಿದೆ. ಆದರೆ ಯುಪಿಎ ಸರ್ಕಾರದ ಆದೇಶವನ್ನು ಈಗ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೆ ಹೆಸರನ್ನು ಮಾತ್ರ ಕೇಳಲಾಗಿದೆ.. ಇದಕ್ಕೇ ಏಕೆ ಗಲಾಟೆ.. 2011 ರಲ್ಲಿ, ಎಲ್ಲಾ ಧಾಬಾ ಮತ್ತು ರೆಸ್ಟೋರೆಂಟ್ ಮಾಲೀಕರು ತಮ್ಮ ಹೆಸರು ಮತ್ತು ಪರವಾನಗಿ ಸಂಖ್ಯೆಯನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ ಹಾಕಬೇಕೆಂದು ನಿಯಮಗಳನ್ನು ರಚಿಸಲಾಗಿದೆ. ಆದರೆ ಈಗ ಕೆಲವರು 13 ವರ್ಷಗಳ ನಂತರ ತಮ್ಮ ಸೆಕ್ಯುಲರ್ ಕನ್ನಡಕವನ್ನು ಏಕೆ ಧರಿಸಿದ್ದಾರೆ? ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಸಂಗಮ್ ಆಗಿದ್ದ ಹೊಟೆಲ್ ಹೆಸರು ಈಗ 'ಸಲೀಂ'
ಉತ್ತರ ಪ್ರದೇಶ ಸರ್ಕಾರದ ಆದೇಶದ ಬೆನ್ನಲ್ಲೇ ಕನ್ವರ್ ಯಾತ್ರೆಯಲ್ಲಿ ಹಾದಿಯಲ್ಲಿ ಬರುವ ಹೋಟೆಲ್ ಗಳ ಹೆಸರು ಬದಲಾವಣೆಯಾಗಿದೆ. ಈ ಹಿಂದೆ ಹಿಂದೂ ಹೆಸರುಗಳಲ್ಲಿದ್ದ ಸಾಕಷ್ಟು ಹೊಟೆಲ್ ಗಳ ಹೆಸರು ಇದೀಗ ಮುಸ್ಲಿಂ ಹೆಸರುಗಳಾಗಿ ಬದಲಾಗಿದೆ. ದೆಹಲಿ-ಡೆಹ್ರಾಡೂನ್‌ನ ರಾಂಪುರಿ ಬಳಿ 25 ವರ್ಷಗಳಿಂದ ಸಲೀಂ ಎಂಬಾತ ಸಂಗಮ್ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ನಡೆಸುತ್ತಿದ್ದನು.
ಕನ್ವರ್ ಯಾತ್ರಿಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್-ಜಿಲ್ಲಾಡಳಿತವೂ ಅಂಗಡಿಯವರಿಗೆ ತಮ್ಮ ಗುರುತಿನ ಫಲಕವನ್ನು ಅಳವಡಿಸುವಂತೆ ಹೇಳಿದ್ದು ಇದೀಗ ಸಸ್ಯಹಾರಿ ರೆಸ್ಟೋರೆಂಟ್ ಗೆ ಸಲೀಂ ಪ್ಯೂರ್ ವೆಜಿಟೇರಿಯನ್ ರೆಸ್ಟೋರೆಂಟ್ ಎಂಬ ಬೋರ್ಡ್ ಅನ್ನು ಹಾಕಲಾಗಿದೆ.
ಆಹಾರ ಸುರಕ್ಷತಾ ಇಲಾಖೆಯ ನೋಂದಣಿಯಲ್ಲೂ ಸಲೀಂ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಕನ್ವರ್ ಮಾರ್ಗ್‌ನಲ್ಲಿರುವ ಎಲ್ಲಾ ಅಂಗಡಿಗಳು, ಢಾಬಾಗಳು ಮತ್ತು ಗಾಡಿಗಳಲ್ಲಿ ಅಂತಹ ಬದಲಾವಣೆಗಳು ಕಾಣಸಿಗುತ್ತಿವೆ. ಹೆಸರು ಮತ್ತು ಗುರುತು ಬಹಿರಂಗಪಡಿಸಲು ನನ್ನ ಅಭ್ಯಂತರವಿಲ್ಲ ಎಂದು ಧಾಬಾ ಮಾಲೀಕ ಸಲೀಂ ಹೇಳಿದ್ದಾರೆ.