ವಡೋದರಾ: ಗುಜರಾತ್ ನಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ಇತ್ತ ಶಾಲೆಯೊಂದರಲ್ಲಿ ಮಕ್ಕಳು ಇರುವಾಗಲೇ ಗೋಡೆ ಕುಸಿದು ಹಲವು ಮಕ್ಕಳು ಗಾಯಗೊಂಡಿದ್ದಾರೆ.
ಗುಜರಾತ್ ನ ವಡೋದರಾದಲ್ಲಿ ಈ ಘಟನೆ ನಡೆದಿದ್ದು, ದುರ್ಘಟನೆಯ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ವಡೋದರ ಜಿಲ್ಲೆಯ ವಾಘೋಡಿಯೋ ರಸ್ತೆಯಲ್ಲಿರುವ ಶ್ರೀನಾರಾಯಣ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳು ಮಧ್ಯಾಹ್ನ ಊಟದ ಸಮಯದಲ್ಲಿ ತರಗತಿಯಲ್ಲೇ ಊಟ ಮಾಡುತ್ತಿದ್ದಾಗ ದಿಢೀರನೇ ತರಗತಿಯ ಒಂದು ಭಾಗದ ಗೋಡೆ ಕುಸಿದಿದೆ.
ಈ ವೇಳೆ ಪಕ್ಕದಲ್ಲೇ ಇದ್ದ ವಿದ್ಯಾರ್ಥಿಗಳು ಮತ್ತು ಅವರ ಡೆಸ್ಕ್ ಗಳು ಕೂಡ ಕುಸಿದಿದೆ.
ಗೋಡೆ ಕುಸಿದ ಪರಿಣಾಮ ಓರ್ವ ವಿದ್ಯಾರ್ಥಿಗೆ ತೀವ್ರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಡೋದರದ ವಘೋಡಿಯಾ ರಸ್ತೆ ಸಮೀಪದ ಶ್ರೀ ನಾರಾಯಣ ಖಾಸಗಿ ಶಾಲೆಯ ಮೊದಲ ಮಹಡಿಯಲ್ಲಿದ್ದ ತರಗತಿಯ ಗೋಡೆ ಕುಸಿದಿದ್ದು, ಮಧ್ಯಾಹ್ನ 12:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಮಧ್ಯಾಹ್ನ 12:30 ರ ಸುಮಾರಿಗೆ ಘಟನೆ ಸಂಭವಿಸಿದೆ. ದೊಡ್ಡ ಧ್ವನಿ ಬಂದಿತು, ನಂತರ ನಾವು ಸ್ಥಳಕ್ಕೆ ಧಾವಿಸಿದೆವು. ಒಬ್ಬ ವಿದ್ಯಾರ್ಥಿಗೆ ತಲೆಗೆ ಗಾಯವಾಯಿದೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ” ಎಂದು ಶಾಲಾ ಪ್ರಾಂಶುಪಾಲ ರೂಪಲ್ ಶಾ ಹೇಳಿದ್ದಾರೆ.