ನವದೆಹಲಿ: ಮೋದಿ ಸರ್ಕಾರ 3.0 ಅವಧಿಯ ಮೊದಲ ಬಜೆಟ್ ಮಂಡನೆಯಾಗುತ್ತಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎನ್‌ಡಿಎ ಸರ್ಕಾರ ರಚನೆಗೆ ನೆರವಾದ ಜೆಡಿಯು ಮತ್ತು ಟಿಡಿಪಿ ಪ್ರತಿನಿಧಿಸುವ ರಾಜ್ಯಗಳಿಗೆ ಬಂಪರ್ ಅನುದಾನ ಘೋಷಣೆ ಮಾಡಿದ್ದಾರೆ.
ಮಂಗಳವಾರ ಸಂಸತ್‌ನಲ್ಲಿ ತಮ್ಮ ಸತತ ಏಳನೇ ಬಜೆಟ್ ಮಂಡಿಸಿದ ಅವರು, ಬಿಜೆಪಿ ಮಿತ್ರ ಪಕ್ಷಗಳ ಬೇಡಿಕೆಗಳನ್ನು ತಣಿಸುವ ಮೂಲಕ ಅವುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಬಿಹಾರ ಸರ್ಕಾರದ ವಿನಂತಿಯಂತೆ ವಿಶೇಷ ಸ್ಥಾನಮಾನವನ್ನು ಅಭಿವೃದ್ಧಿ ಬ್ಯಾಂಕ್‌ಗಳ ಸಹಾಯದಿಂದ ತ್ವರಿತವಾಗಿ ಜಾರಿಗೊಳಿಸಲಾಗುವುದು. ಬಿಹಾರಕ್ಕೆ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಕ್ರೀಡಾ ಸೌಕರ್ಯಗಳನ್ನು ಒದಗಿಸಲಾಗುವುದು. ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ 26 ಸಾವಿರ ಕೋಟಿ ರೂ ಹಂಚಿಕೆ ಮಾಡಲಾಗುವುದು. ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದ ಸಮಗ್ರ, ತ್ವರಿತ ಅಭಿವೃದ್ಧಿಗಾಗಿ 'ಪೂರ್ವೋದಯ' ಎಂಬ ಪರಿಣಾಮಕಾರಿ ಯೋಜನೆಯನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಲಿದೆ.
ಪೂರ್ವ ಭಾಗದ ಕೈಗಾರಿಕಾ ಕಾರಿಡಾರ್‌ನ ಅಭಿವೃದ್ಧಿಗೆ ಸರ್ಕಾರ ನೆರವು ನೀಡಲಿದೆ. ಬೋಧಗಯಾ- ರಾಜಗಿರ್- ವೈಶಾಲಿ- ದರ್ಬಾಂಗಾ ಸ್ಪರ್ಸ್, ಪಾಟ್ನಾ- ಪುರ್ನ್ಯಾ ಎಕ್ಸ್‌ಪ್ರೆಸ್‌ವೇ, ಬಕ್ಸರ್- ಬಾಗಲ್ಪುರ ಎಕ್ಸ್‌ಪ್ರೆಸ್‌ವೇ ನಿರ್ಮಾಣ ನಡೆಯಲಿದೆ. ಬಕ್ಸರ್‌ನಲ್ಲಿ ಗಂಗಾ ನದಿಗೆ ಅಡ್ಡಲಾಗಿ ಎರಡು ಲೇನ್‌ನ ಸೇತುವೆಯನ್ನು 26 ಸಾವಿರ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದು. ಪಿರ್ ಪಯಾಂತಿಯಲ್ಲಿ 21,400 ಕೋಟಿ ರೂ ವೆಚ್ಚದಲ್ಲಿ 2400 ಮೆಗಾ ವ್ಯಾಟ್ ವಿದ್ಯುತ್ ಯೋಜನೆ ಸೇರಿದಂತೆ ಹಲವು ವಿದ್ಯುತ್ ಯೋಜನೆಗಳನ್ನು ಆರಂಭಿಸಲಾಗುವುದು.
ಬಿಹಾರದಲ್ಲಿ ಮಳೆಯಿಂದ ಪ್ರವಾಹ ತಡೆಗೆ ಹಾಗೂ ನೀರಾವರಿಗೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಪ್ರವಾಹಪೀಡಿತ ಬಿಹಾರಕ್ಕೆ 11,500 ಕೋಟಿ ರೂ ನೆರವು. ಬೋಧಗಯಾದಲ್ಲಿ ಮಹಾಬೋಧಿ ದೇವಸ್ಥಾನ ಕಾರಿಡಾರ್ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಅವಕಾಶ ನೀಡಲಾಗುವುದು. ನಳಂದಾವನ್ನು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ನೆರವು ನೀಡಲಾಗುವುದು. ಈ ಮೂಲಕ ನಳಂದಾವನ್ನು ಪ್ರವಾಸೋದ್ಯಮ ಹಬ್ ಆಗಿ ಪರಿವರ್ತಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗಯಾದಲ್ಲಿ ವಿಷ್ಣುಪಥ ದೇಗುಲ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಆಂಧ್ರಪ್ರದೇಶಕ್ಕೆ ವಿಶೇಷ ಆರ್ಥಿಕ ನೆರವನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ, ವಿಶೇಷ ರಾಜ್ಯ ಸ್ಥಾನಮಾನಕ್ಕೆ ಬೇಡಿಕೆ ಇರಿಸಿತ್ತು. ಆದರೆ ಅದನ್ನು ಈಡೇರಿಸದೆ ಇದ್ದರೂ, ಅದಕ್ಕೆ ಪೂರಕವಾದ ಆರ್ಥಿಕ ನೆರವು ಪ್ರಕಟಿಸಲಾಗಿದೆ.
ಪೂರ್ವ ರಾಜ್ಯಗಳ ಅಭಿವೃದ್ಧಿಗೆ ಪೂರಕವಾಗಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಇದರಲ್ಲಿ ಪೂರ್ವೋದಯ ಎಂಬ ಯೋಜನೆ ಮೂಲಕ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಆಂಧ್ರಪ್ರದೇಶವನ್ನು ಒಳಗೊಂಡ ಯೋಜನೆಯನ್ನು ಘೋಷಿಸಲಾಗಿದೆ.
ಆಂಧ್ರಪ್ರದೇಶದ ಮರು ಸಂಘಟನಾ ಕಾಯ್ದೆಯ ಭರವಸೆಗಳನ್ನು ಈಡೇರಿಸಲಾಗುವುದು. ಹೊಸ ರಾಜಧಾನಿಯ ನಿರ್ಮಾಣಕ್ಕಾಗಿ ಕಾಯ್ದೆ ಅಡಿ 15 ಸಾವಿರ ಕೋಟಿ ರೂ ಅನುದಾನವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಡುಗಡೆ ಮಾಡಲಾಗುವುದು. ಮುಂಬರುವ ವರ್ಷಗಳಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಬಹುಪಕ್ಷೀಯ ಸಂಸ್ಥೆಗಳ ಮೂಲಕ ವಿಶೇಷ ಆರ್ಥಿಕ ಬೆಂಬಲ ಒದಗಿಸಲಾಗುವುದು ಎಂದು ನಿರ್ಮಲಾ ತಿಳಿಸಿದರು.
ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಶೇ 3ರ ಬಡ್ಡಿ ದರದಂತೆ ಸಾಲ ಸೌಲಭ್ಯ ಘೋಷಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಯುವಜನರಿಗೆ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳನ್ನು ಬಜೆಟ್‌ನಲ್ಲಿ ಉಲ್ಲೇಖಿಸಲಾಗದೆ. ಇದಕ್ಕಾಗಿ ಗರಿಷ್ಠ ರೂ.7.5 ಲಕ್ಷ ಸಾಲ ನೀಡಲು ಅವಕಾಶವಿದೆ. ಒಂದು ಸಾವಿರ ಐಟಿಐ ಅಭ್ಯರ್ಥಿಗಳಿಗೆ ಹಬ್ ಅಂಡ್ ಸ್ಪೋಕ್ ಮಾದರಿಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ದೇಶೀಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಯೋಜನೆಗಳಿಗೆ ರೂ.10 ಲಕ್ಷವರೆಗೆ ಸಾಲ ಸೌಲಭ್ಯ ನೀಡುವುದಾಗಿ ಘೋಷಿಸಿದರು