ನವದೆಹಲಿ: ಮೋದಿ 3.0 ಸರ್ಕಾರದ ಮೊದಲ ಕೇಂದ್ರ ಬಜೆಟ್ ತನ್ನ "ಸಬ್ಕಾ ಸಾಥ್ ಸಬ್ಕಾ ವಿಕಾಸ್" ಮಂತ್ರವನ್ನು ಆಧರಿಸಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ. ಇನ್ನು ಕೆಲವೇ ಹೊತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25 ರ ಸಂಪೂರ್ಣ ಬಜೆಟ್ ನ್ನು ಮಂಡಿಸಲಿದ್ದು ಇದು ಅವರ ದಾಖಲೆಯ ಸತತ ಏಳನೇ ಬಾರಿ ಮಂಡಿಸುತ್ತಿರುವ ಕೇಂದ್ರ ಬಜೆಟ್ ಆಗಿದೆ.
ಈಗಾಗಲೇ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಅನುಮತಿ ಪಡೆದಿದ್ದು ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಹಣಕಾಸು ಸಚಿವೆ ಭೇಟಿ ಮಾಡಿದ್ದಾರೆ.
ಈ ಬಜೆಟ್ ಪ್ರಧಾನಿ ಮೋದಿಯವರ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಂತ್ರವನ್ನು ಆಧರಿಸಿದೆ" ಎಂದು ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದರು. ಬಜೆಟ್ ಮಂಡನೆಗೆ ಮುಂಚಿತವಾಗಿ ಹಣಕಾಸು ಸಚಿವಾಲಯದ ನಾರ್ತ್ ಬ್ಲಾಕ್ ಕಚೇರಿಗಳನ್ನು ತಲುಪಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರ ತಂಡದಲ್ಲಿ ಚೌಧರಿ ಮೊದಲಿಗರಾಗಿದ್ದರು. ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ವಿವೇಕ್ ಜೋಶಿ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಕೂಡ ಜೊತೆಗಿದ್ದರು.
ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಸಂಸತ್ತಿನಲ್ಲಿ ಅಂಕಿಅಂಶಗಳ ಅನುಬಂಧದೊಂದಿಗೆ ಆರ್ಥಿಕ ಸಮೀಕ್ಷೆ 2023-24 ನ್ನು ಮಂಡಿಸಿದರು. ರಾಜ್ಯಸಭೆಯಲ್ಲಿ 2024-25ನೇ ಸಾಲಿನ ಸರ್ಕಾರದ ಅಂದಾಜು ಸ್ವೀಕೃತಿ ಮತ್ತು ವೆಚ್ಚಗಳ ಹೇಳಿಕೆಯನ್ನು (ಇಂಗ್ಲಿಷ್ ಮತ್ತು ಹಿಂದಿಯಲ್ಲಿ) ಮಂಡಿಸಲಿದ್ದಾರೆ.
ಲೋಕಸಭೆಯಲ್ಲಿ 2024-25ರ ಕೇಂದ್ರ ಬಜೆಟ್ ಮಂಡನೆ ಮುಗಿದ ಒಂದು ಗಂಟೆಯ ನಂತರ ಅವರು ರಾಜ್ಯಸಭೆಯಲ್ಲಿ ಬಜೆಟ್ ಪ್ರತಿಯನ್ನು ಮಂಡಿಸಲಿದ್ದಾರೆ.