ನವದೆಹಲಿ: ಪ್ರಭಾವಿಯಾಗಿರುವ ತನ್ನ ತಂದೆಯ ಕಾರಣದಿಂದಾಗಿ ಮೊದಲ ಪ್ರಯತ್ನದಲ್ಲಿಯೇ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಭಾರತೀಯ ರೈಲ್ವೆ ಕಾರ್ಮಿಕರ ಸೇವೆ (ಐಆರ್‌ಪಿಎಸ್) ಅಧಿಕಾರಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ತೇರ್ಗಡೆಯಾಗಿದ್ದಾರೆ ಎಂದು ಆರೋಪಿಸಿದ್ದ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಮಧ್ಯಂತರ ಆದೇಶ ನೀಡಿದ ನ್ಯಾಯಮೂರ್ತಿ ನವೀನ್ ಚಾವ್ಲಾ 24 ಗಂಟೆಗಳ ಒಳಗೆ ಹೇಳಿಕೆಗಳನ್ನು ತೆಗೆದುಹಾಕುವಂತೆ ಎಕ್ಸ್ (ಟ್ವಿಟರ್) ಮತ್ತು ಗೂಗಲ್‌ಗೆ ಸೂಚಿಸಿದರು. ಪ್ರಸ್ತುತ ಐಆರ್‌ಪಿಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅಂಜಲಿ ಬಿರ್ಲಾ ಅವರು ಅವರ ತಂದೆಯ ಪ್ರಭಾವದಿಂದಾಗಿ ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆ ಪಾಸು ಮಾಡಿದ್ದರು ಎಂಬ ಹಲವು ವರದಿಗಳು ಸಾಮಾಜಿಕ ಜಾಲತಾಣಗಳು ಸೇರಿದಂತೆ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು.
ಇದಾದ ನಂತರ ಕೇಂದ್ರ ಲೋಕಸೇವಾ ಆಯೋಗವೂ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿ, ಅಂಜಲಿ ಬಿರ್ಲಾ 2019ರಲ್ಲಿ ಯುಪಿಎಸ್ ಪರೀಕ್ಷೆ ಬರೆದಿದ್ದು, 2020ರಲ್ಲಿ ಸೇವೆಗೆ ಆಯ್ಕೆಯಾಗಿದ್ದರು ಎಂದು ಹೇಳಿತ್ತು. ಇದರ ಹೊರತಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಮಾನಹಾನಿಕರ ನಕಲಿ ವರದಿಗಳು ಹರಿದಾಡುತ್ತಲೇ ಇದ್ದವು.ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಮಾನ ಹಾನಿ ಪ್ರಕರಣ ದಾಖಲಿಸಿದ್ದರು.