ನವದೆಹಲಿ: ವಾಹನ ಕಸಿದ ಪ್ರಕರಣದಲ್ಲಿ ಅಗ್ನಿವೀರ್ ಸೇರಿ 3 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಮೊಹಾಲಿ ಪೊಲೀಸರು ಹೇಳಿದ್ದಾರೆ.
ಅಗ್ನಿವೀರ್ ಇಶ್ಮೀತ್ ಸಿಂಗ್ ಅಲಿಯಾಸ್ ಇಶು, ಪ್ರಭಪ್ರೀತ್ ಸಿಂಗ್ ಅಲಿಯಸ್ ಪ್ರಭ್ ಹಾಗೂ ಬಲ್ ಕರಣ್ ಸಿಂಗ್ ಬಂಧಿತ ಆರೋಪಿಗಳಾಗಿದ್ದು, ಮೊಹಾಲಿಯ ಬಾಲೊಂಗಿಯಲ್ಲಿ ಬಾಡಿಗೆಗೆ ಕೊಠಡಿ ತೆಗೆದುಕೊಂಡಿದ್ದ ಎಂದು ತಿಳಿದುಬಂದಿದೆ.
ಮೊಹಾಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಕುಮಾರ್ ಗರ್ಗ್, ಬಂಧಿತ 3 ವ್ಯಕ್ತಿಗಳು 2 ದಿನಗಳ ಹಿಂದೆ ಆಪ್ ಮೂಲಕ ರೈಡ್ ಬುಕ್ ಮಾಡಿ ಕಾರಿನ ಚಾಲಕನಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ಕಾರು ಕಳ್ಳತನ ಮಾಡಿದ್ದರು ಎಂದು ತಿಳಿಸಿದ್ದಾರೆ.
ಮೊಹಾಲಿ ಜಿಲ್ಲೆಯಲ್ಲಿ ವಾಹನ ಕಸಿದುಕೊಳ್ಳುವಾಗ ಚಾಲಕನ ಮುಖದ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಂಡಿರುವ ಅಗ್ನಿವೀರ್ ಇಶ್ಮೀತ್ ಎರಡು ತಿಂಗಳ ಹಿಂದೆ ರಜೆಯ ಮೇಲೆ ಪಂಜಾಬ್‌ಗೆ ಬಂದಿದ್ದರು ಆದರೆ ಒಂದು ತಿಂಗಳ ರಜೆಯ ಅವಧಿ ಮುಗಿದ ನಂತರ ಮತ್ತೆ ಕೆಲಸಕ್ಕೆ ಸೇರಲಿಲ್ಲ, ಆರೋಪಿ ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯವರು ಎಂದು ಎಸ್‌ಎಸ್‌ಪಿ ಹೇಳಿದರು.
ತನಿಖೆ ಆರಂಭಿಸಲಾಗಿದ್ದು, ಬುಧವಾರ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ವಾಹನ ದೋಚುವಿಕೆ ಮತ್ತು ಕಳ್ಳತನದ ಇತರ ಕೆಲವು ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಅಪರಾಧಗಳನ್ನು ಮಾಡಿದ ನಂತರ ಫಾಜಿಲ್ಕಾಗೆ ಪರಾರಿಯಾಗುತ್ತಿದ್ದರು ಎಂದು ಅಧಿಕಾರಿ ಹೇಳಿದರು.
"ಇಶ್ಮೀತ್ ಸಿಂಗ್ ಅವರನ್ನು 2022 ರಲ್ಲಿ ಅಗ್ನಿವೀರ್ ಆಗಿ ದಾಖಲಿಸಲಾಗಿದೆ. ಅವರು ಎರಡು ತಿಂಗಳ ಹಿಂದೆ ರಜೆಯ ಮೇಲೆ ಬಂದಿದ್ದರು ಆದರೆ ಅವರ ಕರ್ತವ್ಯಕ್ಕೆ ಹಿಂತಿರುಗಲಿಲ್ಲ" ಎಂದು ಎಸ್‌ಎಸ್‌ಪಿ ಹೇಳಿದರು.
ಆರೋಪಿಯಿಂದ ಕಳ್ಳತನವಾದ ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಹಾಗೂ ದೇಶೀ ನಿರ್ಮಿತ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.