ನವಿ ಮುಂಬೈ: ನವಿ ಮುಂಬೈನ ಸಿಬಿಡಿ ಬೇಲಾಪುರ ಪ್ರದೇಶದಲ್ಲಿ ಶನಿವಾರ ಮುಂಜಾನೆ ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಅವಶೇಷಗಳಡಿಯಲ್ಲಿ ಸಿಲುಕಿರುವ ಇನ್ನಿಬ್ಬರನ್ನು ಪತ್ತೆ ಮಾಡಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಹಬಾಜ್ ಗ್ರಾಮದಲ್ಲಿ ನಸುಕಿನ ಜಾವ 4.50 ಕ್ಕೆ ಸಂಭವಿಸಿದ ಘಟನೆಯ ನಂತರ ಇಬ್ಬರನ್ನು ರಕ್ಷಿಸಲಾಗಿದೆ, ಕಟ್ಟಡ ಕುಸಿಯುವ ಮೊದಲು ಅಧಿಕಾರಿಗಳು 52 ನಿವಾಸಿಗಳನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.
ಹಲವು ವಸತಿ ಘಟಕಗಳು ಮತ್ತು ಮೂರು ಅಂಗಡಿಗಳನ್ನು ಹೊಂದಿರುವ ನಾಲ್ಕು ಅಂತಸ್ತಿನ ಕಟ್ಟಡವು ಇಂದು ಮುಂಜಾನೆ ಕುಸಿದಿದೆ. 13 ಮಕ್ಕಳು ಸೇರಿದಂತೆ ಐವತ್ತೆರಡು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಒಬ್ಬ ಪುರುಷ ಮತ್ತು ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ವ್ಯಕ್ತಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಎಂಎಂಸಿ) ಆಯುಕ್ತ ಕೈಲಾಸ್ ಶಿಂಧೆ ತಿಳಿಸಿದ್ದಾರೆ.
ಕುಸಿದು ಬಿದ್ದ ಕಟ್ಟಡ ಕೇವಲ 10 ವರ್ಷ ಹಳೆಯದು ಎಂದರು.
ಮೊಹಮ್ಮದ್ ಮಿರಾಜ್ ಎಂದು ಗುರುತಿಸಲಾದ ವ್ಯಕ್ತಿಯ ಶವವನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಯಿತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತರರನ್ನು ರಕ್ಷಿಸುವ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದರು.
ಎನ್‌ಡಿಆರ್‌ಎಫ್ ಮತ್ತು ನಾಗರಿಕ ಸಂಸ್ಥೆಯ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಇಬ್ಬರನ್ನು ಲಾಲ್ ಮೊಹಮ್ಮದ್ (22) ಮತ್ತು ರುಖ್ಸಾನಾ (21) ಎಂದು ಗುರುತಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯಕ್ಕಾಗಿ ಶ್ವಾನ ದಳವನ್ನು ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿ ತಿಳಿಸಿದ್ದಾರೆ. ಘಟನೆಯ ಕಾರಣವನ್ನು ಎನ್‌ಎಂಎಂಸಿ ತನಿಖೆ ನಡೆಸಲಿದೆ.
ರಕ್ಷಿಸಲ್ಪಟ್ಟ ವ್ಯಕ್ತಿಗಳಿಗೆ ಗಾಯಾಳು ಮತ್ತು ಸಂತ್ರಸ್ತರಿಗೆ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದಾರೆ ಎಂದು ಥಾಣೆ ಜಿಲ್ಲೆಯ ಅಧಿಕೃತ ಪ್ರಕಟಣೆ ತಿಳಿಸಿದೆ.