ಕೇರಳ ಭೂಕುಸಿತ ಮತ್ತು ಸಿಎಂ ಪಿಣರಾಯಿ ವಿಜಯನ್ 
ದೇಶ

Wayanad Landslide: ಭೂಕುಸಿತದ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕೆ ನೀಡಿರಲಿಲ್ಲ; Amit Shah ಹೇಳಿಕೆ ತಿರಸ್ಕರಿಸಿದ ಕೇರಳ ಸಿಎಂ

ದುರಂತ ಪೀಡಿತ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 115 ರಿಂದ 204 ಮಿ.ಮೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ ಮೊದಲ 24 ಗಂಟೆಗಳಲ್ಲಿ 200 ಮಿ.ಮೀ ಮತ್ತು ನಂತರದ 24 ಗಂಟೆಗಳಲ್ಲಿ 372 ಮಿ.ಮೀ ಮಳೆಯಾಗಿದೆ.

ತಿರುವನಂತಪುರಂ: ವಯನಾಡು ಭೂಕುಸಿತದ ಬಗ್ಗೆ ಎಚ್ಚರಿಕೆ ನೀಡಿದರೂ ಕೇರಳ ಕ್ರಮ ಕೈಗೊಂಡಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರಸ್ಕರಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಭೂಕುಸಿತದ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕೆ ಬಂದಿರಲಿಲ್ಲ. ಅಮಿತ್ ಶಾ ಹೇಳಿರುವುದು ಸುಳ್ಳಾಗಿದೆ. ಈ ಸಂಕಷ್ಟದ ಸಮಯದಲ್ಲಿ ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವ ಬದಲು ದುರಂತಕ್ಕೀಡಾದ ಸಂತ್ರಸ್ತರ ನೆರವಿಗೆ ಮುಂದಾಗಬೇಕು. ಇದು ಒಬ್ಬರನ್ನೊಬ್ಬರು ದೂಷಿಸುವ ಸಮಯವಲ್ಲ. ವಾಸ್ತವಾಂಶ ಎಲ್ಲರಿಗೂ ಗೊತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ದುರಂತ ಪೀಡಿತ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 115 ರಿಂದ 204 ಮಿ.ಮೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ ಮೊದಲ 24 ಗಂಟೆಗಳಲ್ಲಿ 200 ಮಿ.ಮೀ ಮತ್ತು ನಂತರದ 24 ಗಂಟೆಗಳಲ್ಲಿ 372 ಮಿ.ಮೀ ಮಳೆಯಾಗಿದೆ. ಇದು ಎಚ್ಚರಿಕೆಗಿಂತ ಹೆಚ್ಚು. ದುರಂತಕ್ಕೂ ಮುನ್ನ ಒಮ್ಮೆಯೂ ರೆಡ್ ಅಲರ್ಟ್ ನೀಡಿರಲಿಲ್ಲ. ಅಪಘಾತದ ಬಳಿಕ ಬೆಳಗ್ಗೆ 6 ಗಂಟೆಗೆ ರೆಡ್ ಅಲರ್ಟ್ ನೀಡಲಾಗಿತ್ತು. 23ರಿಂದ 28ರವರೆಗೆ ವಯನಾಡಿನಲ್ಲಿ ಆರೆಂಜ್ ಅಲರ್ಟ್ ಕೂಡ ನೀಡಿಲ್ಲ. ವಯನಾಡಿನಲ್ಲಿ ಭಾರತೀಯ ಭೂಗರ್ಭ ಇಲಾಖೆ ಸ್ಥಾಪಿಸಿರುವ ಕೇಂದ್ರದಿಂದ ನವೆಂಬರ್ 29ರಂದು ನೀಡಿರುವ ಎಚ್ಚರಿಕೆ ಗ್ರೀನ್ ಅಲರ್ಟ್ ಆಗಿದೆ.

ಇದು ಸಣ್ಣ ಭೂಕುಸಿತ ಮತ್ತು ಭೂಕುಸಿತದ ಎಚ್ಚರಿಕೆಯಾಗಿದೆ. ಅಷ್ಟರಲ್ಲಾಗಲೇ ಧಾರಾಕಾರ ಮಳೆ ಸುರಿದು ಅನಾಹುತ ಸಂಭವಿಸಿದೆ. ಕೇಂದ್ರ ಜಲ ಆಯೋಗವು ಜುಲೈ 23-29 ರ ಅವಧಿಯಲ್ಲಿ ಇರುವಂಜಿಪುಳ ಅಥವಾ ಚಾಲಿಯಾರ್‌ನಲ್ಲಿ ಪ್ರವಾಹದ ಎಚ್ಚರಿಕೆಯನ್ನು ನೀಡಲಿಲ್ಲ. ಇವೆಲ್ಲ ಸತ್ಯವಾಗಿರುವಾಗ ಅಮಿತ್ ಶಾ ಹೇಗೆ ಸಂಸತ್ತಿನಲ್ಲಿ ಅಸತ್ಯವಾದ ಮಾತುಗಳನ್ನು ಹೇಳಿದರು ಎಂದು ವಿಜಯನ್ ಪ್ರಶ್ನಿಸಿದ್ದಾರೆ.

ಮುಂಗಾರು ಆರಂಭದಿಂದಲೂ ಕೇಂದ್ರ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯಂತೆ ಸರ್ಕಾರ ಪ್ರತಿ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸಿದ್ಧಪಡಿಸಿದೆ. ಈ ಪ್ರದೇಶದಲ್ಲಿ, ಕೆಂಪು ವಲಯದ ಭಾಗವಾಗಿರುವ ಸ್ಥಳಗಳಲ್ಲಿ ಜನರನ್ನು ಸ್ಥಳಾಂತರಿಸಲಾಗಿದೆ. ಆದ್ದರಿಂದ, ದುರಂತದ ಪ್ರಮಾಣವನ್ನು ಕಡಿಮೆ ಮಾಡಬಹುದು. ಭೂಕುಸಿತ ಸಂಭವಿಸಿದ ಸ್ಥಳದಿಂದ ಆರು ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲೂ ಭೂಕುಸಿತ ಸಂಭವಿಸಿದೆ. ಕೇರಳದಲ್ಲಿ ಹಿಂದೆಂದೂ ಕಂಡರಿಯದ ಮಳೆ ಸುರಿಯುತ್ತಿದೆ.

ದುರಂತ ತಡೆಯಲು ಕ್ರಮ ಕೈಗೊಳ್ಳಬೇಕು. ಹವಾಮಾನ ವೈಪರೀತ್ಯದ ಅನಾಹುತಗಳನ್ನು ಯಾರ ಹೆಗಲ ಮೇಲೂ ಹೊರಿಸದೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು. ಈಗ ಒಬ್ಬರನ್ನೊಬ್ಬರು ದೂಷಿಸದೆ ವಿಪತ್ತಿಗೆ ಒಳಗಾದವರನ್ನು ರಕ್ಷಿಸಲು ಸಾಮೂಹಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಸಿಎಂ ವಿಜಯನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪರಿಹಾರ ನಿಧಿಗೆ ದೇಣಿಗೆ ನೀಡಿ: ಸಿಎಂ ಮನವಿ

ಇದೇ ವೇಳೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಎಲ್ಲರೂ ಸಿದ್ಧರಾಗಿರಬೇಕು ಎಂದು ಮನವಿ ಮಾಡಿದ ಪಿಣರಾಯಿ ವಿಜಯನ್, 'ಸಂತ್ರಸ್ತರಿಗೆ ಸಹಾಯ ಮಾಡುವ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳನ್ನು ತಪ್ಪಿಸಬೇಕು. ಹಲವೆಡೆ ಹಣ, ಬಟ್ಟೆ, ಆಹಾರ ಸಂಗ್ರಹಿಸುತ್ತಿವುದು ವಯನಾಡಿಗೆ ಒಳ್ಳೆಯದಲ್ಲ. ಅಲ್ಲಿ ಅಗತ್ಯ ವಸ್ತುಗಳನ್ನೆಲ್ಲ ಸಜ್ಜುಗೊಳಿಸಲಾಗಿದೆ.

ಹಾಗಾಗಿ ಇಂತಹ ಚಟುವಟಿಕೆಗಳು ಅನಗತ್ಯವಾಗುತ್ತವೆ. ಅದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವವರು ಇಂತಹ ಚಳವಳಿಗಳನ್ನು ನಿಲ್ಲಿಸಬೇಕು. ಇಲ್ಲಿಯವರೆಗೆ ಸಂಗ್ರಹಿಸಿದ ವಸ್ತುಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಬೇಕು. ಅಗತ್ಯ ಬಿದ್ದರೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದಂತೆ ನಡೆದುಕೊಳ್ಳುವುದು ಒಳಿತು ಎಂದೂ ವಿಜಯನ್ ಹೇಳಿದರು.

ಹವಾಮಾನ ಎಚ್ಚರಿಕೆ ನಿರ್ಲಕ್ಷಿಸಿದ್ದ ಕೇರಳ: ಅಮಿತ್ ಶಾ

ಹವಾಮಾನ ಎಚ್ಚರಿಕೆಗಳನ್ನು ಕೇರಳ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಎಚ್ಚರಿಕೆ ನೀಡಿದರೂ ಕೇರಳ ಏನು ಮಾಡಿದೆ ಎಂದು ಅಮಿತ್ ಶಾ ಲೋಕಸಭೆಯಲ್ಲಿ ಪ್ರಶ್ನಿಸಿದರು.

ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ಬಗ್ಗೆ ಕೇಂದ್ರ ಸರ್ಕಾರವು ನೀಡಿದ ಮುನ್ನೆಚ್ಚರಿಕೆಗಳನ್ನು ಕ್ರಮಗೊಳಿಸಲು ಕೇರಳ ಸರ್ಕಾರ ವಿಫಲವಾಗಿದೆ. ಸಂಭಾವ್ಯ ಭೂಕುಸಿತದ ಬಗ್ಗೆ ಕೇಂದ್ರವು ಜುಲೈ 23, 24 ಮತ್ತು 25 ರಂದು ಕೇರಳ ಸರ್ಕಾರಕ್ಕೆ ಮುನ್ನೆಚ್ಚರಿಕೆಗಳನ್ನು ನೀಡಿತ್ತು. ಆದರೆ ರಾಜ್ಯ ಸರ್ಕಾರವು ದುರ್ಬಲ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿಲ್ಲ.

ಕೇರಳ ಸರ್ಕಾರವು ಕೇಂದ್ರದ ಮುಂಚಿನ ಎಚ್ಚರಿಕೆಗಳ ಮೇಲೆ ಕಾರ್ಯನಿರ್ವಹಿಸಬೇಕಿತ್ತು ಮತ್ತು ಹೆಚ್ಚಿನ ಅಪಾಯದ ಪ್ರದೇಶಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಬೇಕಿತ್ತು. ಅವರು ಸಮಯೋಚಿತ ಕ್ರಮ ಕೈಗೊಂಡಿದ್ದರೆ, ಅನೇಕ ಜೀವಗಳನ್ನು ಉಳಿಸಬಹುದಿತ್ತು ಎಂದು ಲೋಕಸಭೆಯಲ್ಲಿ ಅಮಿತ್ ಶಾ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT