ನವದೆಹಲಿ: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಶನಿವಾರ ನಡೆಯುತ್ತಿದ್ದು, ಸಂಜೆ ವೇಳೆಗೆ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಆರಂಭವಾಗಲಿದೆ. ಆದರೆ ಎಕ್ಸಿಟ್ ಪೋಲ್ ಚರ್ಚೆಗಳನ್ನು ಬಹಿಷ್ಕರಿಸಲು ನಿರ್ಧಾರಿಸಿದ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಇಡೀ ಚುನಾವಣಾ ಪ್ರಚಾರದ ಸಮಯದಲ್ಲಿ, ಕಾಂಗ್ರೆಸ್ ತಾನು ಬಹುಮತ ಪಡೆಯುವುದಾಗಿ ಹೇಳಿಕೊಳ್ಳುತ್ತಿತ್ತು. ಆದರೆ ಈಗ ಅವರು ಸಂಪೂರ್ಣ ಎಕ್ಸಿಟ್ ಪೋಲ್ ಚರ್ಚೆಗಳನ್ನು ಬಹಿಷ್ಕರಿಸುತ್ತಿದ್ದಾರೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿರುವುದರಿಂದ ಎಕ್ಸಿಟ್ ಪೋಲ್ ಚರ್ಚೆಗಳು ಅರ್ಥಹೀನ ಎಂದು ಪ್ರತಿಪಾದಿಸುತ್ತಿದ್ದಾರೆ" ಎಂದು ಅಮಿತ್ ಶಾ ಹೇಳಿದ್ದಾರೆ.
ರಾಹುಲ್ ಗಾಂಧಿ ಪಕ್ಷದ ನಾಯಕತ್ವವನ್ನು ವಹಿಸಿಕೊಂಡ ನಂತರ ಬಹಿಷ್ಕರಿಸುವುದು ಕಾಂಗ್ರೆಸ್‌ನ ಲಕ್ಷಣವಾಗಿದೆ. ಅವರು ತೀರ್ಪು ತಮಗೆ ಅನುಕೂಲವಾಗದಿದ್ದಾಗ ಸುಪ್ರೀಂ ಕೋರ್ಟ್‌ನ ಸಮಗ್ರತೆಯನ್ನು ಪ್ರಶ್ನಿಸಿದ್ದಾರೆ. ಅವರು ಚುನಾವಣಾ ಆಯೋಗ ಮತ್ತು ಇವಿಎಂಗಳ ಸಮಗ್ರತೆಯನ್ನು ಪ್ರಶ್ನಿಸಿದ್ದಾರೆ. ಸಾಂವಿಧಾನಿಕ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳನ್ನು ಮತ್ತು ವಿವಿಧ ಏಜೆನ್ಸಿಗಳನ್ನು ಟೀಕಿಸಿದ್ದಾರೆ. ದೇಶದ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟುಕೊಳ್ಳದ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರಿಗೆ ಬಹಿಷ್ಕರಿಸುವುದು ರೂಢಿಯಾಗಿದೆ ಎಂದು ಅಮಿತ್ ಶಾ ಟೀಕಿಸಿದ್ದಾರೆ.
ಆಸ್ಟ್ರಿಚ್‌ನಂತೆ ಮುಖ ಮುಚ್ಚಿಕೊಳ್ಳುವುದರಿಂದ ಯಾವುದೇ ಪ್ರಯೋಜನೆ ಇಲ್ಲ. ಸೋಲನ್ನು ಧೈರ್ಯದಿಂದ ಎದುರಿಸಿ ಮುನ್ನಡೆಯಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಹೇಳಲು ಬಯಸುತ್ತೇನೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.