ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ (TDP) ಅರ್ಧದ ಗಡಿ ದಾಟಿದ್ದು, ಮತ ಎಣಿಕೆಯಲ್ಲಿ ಆರಂಭಿಕ ಟ್ರೆಂಡ್ ಆಡಳಿತಾರೂಢ ವೈಎಸ್ಆರ್ ಗೆ ಹಿನ್ನಡೆ ತೋರಿಸುತ್ತಿದೆ. ಕಾಂಗ್ರೆಸ್ ಕೇವಲ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಭಾರೀ ಹಿನ್ನಡೆಯಲ್ಲಿದೆ.
ಬೆಳಗ್ಗೆ 10 ಗಂಟೆಯ ಹೊತ್ತಿಗೆ ಆಂಧ್ರಪ್ರದೇಶದಲ್ಲಿ ಟಿಡಿಪಿ 123 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ 22 ಸ್ಥಾನಗಳಲ್ಲಿ ಮುನ್ನಡೆಯೊಂದಿಗೆ ಹಿಂದೆ ಬಿದ್ದಿದೆ.
ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಪಲ್ನಾಡು ಪ್ರದೇಶ, ತಿರುಪತಿ ಮತ್ತು ತಾಡಿಪತ್ರಿಯಲ್ಲಿ ಚುನಾವಣೋತ್ತರ ಹಿಂಸಾಚಾರದ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯ ನಡುವೆ ಮೇ 13 ರಂದು ಆಂಧ್ರ ಪ್ರದೇಶದ 175 ವಿಧಾನಸಭೆ ಮತ್ತು 25 ಸಂಸತ್ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.
ತೀವ್ರ ಪೈಪೋಟಿಯಿಂದ ಕೂಡಿದ ಈ ಕದನದಲ್ಲಿ ಆಡಳಿತಾರೂಢ ವೈಎಸ್‌ಆರ್‌ಸಿ, ಟಿಡಿಪಿ, ಬಿಜೆಪಿ ಮತ್ತು ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಅವರ ಜನ ಸೇನಾ ಪಾರ್ಟಿ (JSP) ಒಳಗೊಂಡಿರುವ ವಿರೋಧ ಪಕ್ಷದ ಎನ್‌ಡಿಎ ಪ್ರಮುಖವಾಗಿವೆ.
ಆಡಳಿತಾರೂಢ ವೈಎಸ್‌ಆರ್‌ಸಿ ಅಧಿಕಾರಕ್ಕೆ ಮರಳಲು ಆಶಿಸುತ್ತಿರುವಾಗ, ಎನ್‌ಡಿಎ ಸರ್ಕಾರದ ಕಲ್ಯಾಣ ಮತ್ತು ಅಭಿವೃದ್ಧಿಯ ವಿಷಯಗಳನ್ನು ಮುಂದಿಟ್ಟುಕೊಂಡು ಟಿಡಿಪಿ ಬಹುಮತವನ್ನು ನಿರೀಕ್ಷಿಸುತ್ತಿದೆ.
ಕಳೆದ ಎರಡು ಚುನಾವಣೆಗಳಂತೆ ಕಾಂಗ್ರೆಸ್ ಈ ಬಾರಿ ಕೂಡ ಆಂಧ್ರ ಪ್ರದೇಶದಲ್ಲಿ ಯಾವುದೇ ಪ್ರಭಾವ ಬೀರುವ ಲಕ್ಷಣ ಕಾಣುತ್ತಿಲ್ಲ. ಈ ಬಾರಿ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ವೈಎಸ್ ಶರ್ಮಿಳಾ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು ಆ ಮೂಲಕ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳ ನಿರೀಕ್ಷೆಯಲ್ಲಿದೆ.
ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಎಕ್ಸಿಟ್ ಪೋಲ್ ಗಳು ಟಿಡಿಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ 111-135 ಸ್ಥಾನಗಳ ಪ್ರಕ್ಷೇಪಗಳೊಂದಿಗೆ ಪ್ರಮುಖ ಜಯವನ್ನು ಸೂಚಿಸಿದ್ದವು. ವೈಎಸ್‌ಆರ್‌ಸಿಪಿ 45-60 ಸ್ಥಾನಗಳಿಗೆ ಸೀಮಿತಗೊಳ್ಳುವ ನಿರೀಕ್ಷೆಯಿದೆ. ಕೆಲವು ಸಮೀಕ್ಷೆಗಳು 175 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಟಿಡಿಪಿ ನೇತೃತ್ವದ ಮೈತ್ರಿಕೂಟಕ್ಕೆ 161 ಸ್ಥಾನಗಳನ್ನು ನೀಡಿದ್ದವು.