ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜನತೆ ಕಮಾಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಜನರು ದೇಶದ ರಾಜಕೀಯ ಮತ್ತು ಸಂವಿಧಾನದ ಅಪಾಯವನ್ನು ಅರ್ಥಮಾಡಿಕೊಂಡಿದ್ದು, ಸಂವಿಧಾನವನ್ನು ರಕ್ಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಗೌರವಯುತವಾಗಿ ಮಾತನಾಡುವುದಿಲ್ಲ. ಆದರೆ ಕೆಎಲ್ ಶರ್ಮಾ ಕಳೆದ 40 ವರ್ಷಗಳಿಂದ ಅಮೇಥಿಯಲ್ಲಿ ಕೆಲಸ ಮಾಡುತ್ತಿದ್ದಾರೆ; ಅವರ ಗೆಲುವು ನಿಶ್ಚಿತವಾಗಿತ್ತು ಎಂದು ಹೇಳಿದ ರಾಹುಲ್, ವಯನಾಡು ಅಥವಾ ರಾಯ್ ಬರೇಲಿ ಎರಡರಲ್ಲಿ ಯಾವುದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಗುವುದು, ತೆರೆಮರೆಯಲ್ಲಿ ಕೆಲಸ ಮಾಡಿದ ಪ್ರಿಯಾಂಕಾ ಗಾಂಧಿ ಅವರಿಗೂ ಧನ್ಯವಾದ ಸಲ್ಲಿಸಲಾಗುವುದು ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಾತ್ರವಲ್ಲದೆ ಸಾಂವಿಧಾನಿಕ ಸಂಸ್ಥೆಗಳು, ದೇಶದ ಆಡಳಿತ ರಚನೆ, ಸಿಬಿಐ ಮತ್ತು ಇಡಿ ನ್ಯಾಯಾಂಗದ ವಿರುದ್ಧವೂ ಹೋರಾಡಿದ್ದೇವೆ ಏಕೆಂದರೆ ಈ ಎಲ್ಲಾ ಸಂಸ್ಥೆಗಳನ್ನು ಅಮಿತ್ ಶಾ ಮತ್ತು ನರೇಂದ್ರ ಮೋದಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಇಂಡಿಯಾ ಮೈತ್ರಿಕೂಟದಿಂದ ಸರ್ಕಾರ ರಚನೆಯ ಸಾಧ್ಯತೆಗಳ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಮೈತ್ರಿ ಪಾಲುದಾರರೊಂದಿಗೆ ನಾಳೆ ಸಭೆ ನಡೆಸುತ್ತೇವೆ. ಮೈತ್ರಿ ಪಾಲುದಾರರನ್ನು ಗೌರವಿಸುತ್ತೇವೆ. ಅವರನ್ನು ಕೇಳದೆ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳಿದರು.