ಡೆಹ್ರಾಡೂನ್: ಭಾರತೀಯ ವಾಯುಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಜಂಟಿ ಕಾರ್ಯಾಚರಣೆಯ ನಂತರ, ಸಹಸ್ತ್ರತಾಲ್‌ನಲ್ಲಿ ಸಿಲುಕಿಕೊಂಡಿದ್ದ 22 ಚಾರಣಿಗರಲ್ಲಿ ಎಂಟು ಮಂದಿಯನ್ನು ಸುರಕ್ಷಿತವಾಗಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಕೆಲವರಿಗೆ ದೈಹಿಕವಾಗಿ ಯಾವುದೇ ಹಾನಿಯಾಗದಿದ್ದರೂ ಅವರ ಮುಖದಲ್ಲಿ ಭೀತಿ ಆವರಿಸಿತ್ತು. ಒಂಬತ್ತು ಚಾರಣಿಗರು ಪ್ರಾಣ ಕಳೆದುಕೊಂಡ ನಂತರ ಅವರು ಇನ್ನೂ ಆಘಾತದ ಸ್ಥಿತಿಯಲ್ಲಿದ್ದಾರೆ.
ಉತ್ತರಕಾಶಿಯ ಮನೇರಿಯಲ್ಲಿರುವ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿಯ ಮಾರ್ಗದರ್ಶನದಲ್ಲಿ ಮೇ 29 ರಂದು ಕರ್ನಾಟಕದಿಂದ ಬಂದಿದ್ದ 22 ಚಾರಣಿಗರ ತಂಡವು ಸಹಸ್ತ್ರತಾಲ್‌ಗೆ ಚಾರಣ ಕೈಗೊಂಡಿತ್ತು. ತಂಡದ ಜೊತೆ ಎಂಟು ಹೇಸರಗತ್ತೆಗಳು ಮತ್ತು ಮೂವರ ಅನುಭವಿ ಮಾರ್ಗದರ್ಶಿಗಳಿದ್ದರು ಎಂದು ರಾಜ್ಯ ವಿಪತ್ತು ನಿಯಂತ್ರಣ ಕಚೇರಿ ತಿಳಿಸಿದೆ.
ಜೂನ್ 2 ರ ಸಂಜೆ ಅನಿರೀಕ್ಷಿತ ಹಿಮಬಿರುಗಾಳಿಯು ಅವರ ಮೇಲೆ ಬಿದ್ದಿದೆ. ಎಲ್ಲೆಡೆ ಹಿಮರಾಶಿ ಆವರಿಸಿತು ಎಂದು ಚಾರಣಿಗರೊಬ್ಬರು ಹೇಳಿದರು. ಬಿರುಗಾಳಿಯು ಗಂಟೆಗೆ ಸುಮಾರು 90 ಕಿಲೋಮೀಟರ್ ನಷ್ಟಿತ್ತು. ಹಿಮದಿಂದ ಬೇರ್ಪಡಲು ಸಾಧ್ಯವಾಗದೆ ಕಗ್ಗತ್ತಲ್ಲಿ ಇರುವಂತಾಗಿತ್ತು ಎಂದು ಬದುಕುಳಿದವರು ಹೇಳಿದ್ದಾರೆ. ದುರಂತ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಅನುಭವ ಹಂಚಿಕೊಂಡ ಚಾರಣಿಗ ವಿಎಸ್ ಜಯ ಪ್ರಕಾಶ್, ಅಂದು ಸಂಜೆ ಹಠಾತ್ತನೆ ಕೊರೆಯುವ ಚಳಿಯು ಅಸಹನೀಯ ಮಟ್ಟಕ್ಕೆ ಏರಿತು. ನಾವು ಅನುಭವಿಸಿದ ಹೀನಾಯ ಅನುಭವವು ನೆನಪಿನಲ್ಲಿ ಶಾಶ್ವತವಾಗಿ ಇರುತ್ತದೆ. ಸೋಮವಾರ ಸಂಜೆ, ನಮ್ಮ ಗುಂಪು ಸಹಸ್ತ್ರತಲ್ ಕಡೆಗೆ ಸಾಗುತ್ತಿದ್ದಾಗ, ಧಾರಾಕಾರ ಮಳೆ, ಹಿಮದ ಗಾಳಿ ಬೀಸಲಾರಂಭಿಸಿತು. ಜೀವವನ್ನು ರಕ್ಷಿಸಿಕೊಳ್ಳಲು ಚಾರಣ ನಿಲ್ಲಿಸುವಂತೆ ಮಾಡಿತು ಎಂದು ಹೇಳಿದರು.
ಮತ್ತೊಬ್ಬ ಚಾರಣಿಗ ಸ್ಮೃತಿ ಪ್ರಕಾಶ್ ಮಾತನಾಡಿ, ಹಿಮ ಬಿರುಗಾಳಿಯ ನಡುವೆ ತೀವ್ರ ರೀತಿಯ ಅಪಾಯವನ್ನು ಎದುರಿಸಿದ್ದೇವು. ನೆಟ್‌ವರ್ಕ್ ಸಂಪರ್ಕದ ಕೊರತೆಯಿಂದ ಸಹಾಯಕ್ಕಾಗಿ ಮಾಡಿದ ಪ್ರಯತ್ನಗಳು ನಿಷ್ಪ್ರಯೋಜಕವಾಗಿತ್ತು. ಯಾರಿಗೂ ನಮ್ಮ ಸಂಕಷ್ಟದ ಬಗ್ಗೆ ತಿಳಿಸಲು ಸಾಧ್ಯವಾಗಲಿಲ್ಲ. ರಾತ್ರಿಯಾಗುತ್ತಿದ್ದಂತೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಿತ್ತು. ಬದುಕುಳಿಯುವುದೇ ಸವಾಲಾಗಿ ಪರಿಣಮಿಸಿತು ಎಂದು ತಿಳಿಸಿದರು.
ಬದುಕುಳಿದ ಆ ಅದೃಷ್ಟದ ರಾತ್ರಿಯನ್ನು ನೆನಪಿಸಿಕೊಂಡ ಸ್ಮೃತಿ, ಮೊಬೈಲ್ ಫೋನ್ ಟಾರ್ಚ್‌ನ ಬೆಳಕನ್ನು ಬಳಸಿ, ರಾತ್ರಿಯಿಡೀ ಸಂವಹನ ಮಾಡಿದೇವು. ಪರಸ್ಪರ ಬೆಂಬಲ ನೀಡಿದ್ದೇವೆ. ಹಸಿವನ್ನು ತಡೆಯಲು ಆಗಾಗ್ಗೆ ಡ್ರೈ ಫ್ರೂಟ್ಸ್ ಗಳನ್ನು ತಿನ್ನುತ್ತಿದ್ದೆವು. ಅಂತಿಮವಾಗಿ ಬುಧವಾರ ಬೆಳಗ್ಗೆ ಹೆಲಿಕಾಪ್ಟರ್ ಬಂದಾಗ ನಾವು ಸುರಕ್ಷಿತವಾಗಿದ್ದೇವೆ ಎಂಬ ಭಾವ ಮೂಡಿತು ಎಂದು ತಿಳಿಸಿದರು. ಉತ್ತರಾಖಂಡ ಸರ್ಕಾರವು ಸಿಲ್ಲಾ-ಕಲ್ಯಾಣ-ಸಹಸ್ತ್ರತಲ್ ಮಾರ್ಗ ಅಪಘಾತದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಅವರು ಗುರುವಾರ ವಿಚಾರಣೆಗೆ ಆದೇಶ ಹೊರಡಿಸಿದ್ದಾರೆ.