ನವದೆಹಲಿ: ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ರಚಿಸಿದ್ದು ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ರಾಜಧಾನಿ ದೆಹಲಿಯ ರಾಜಕೀಯ ಬೀದಿಗಳಿಂದ ಹಿಡಿದು ದೇಶಾದ್ಯಂತ ರಾಜಕೀಯ ಪಕ್ಷಗಳವರೆಗೆ ಪ್ರಧಾನಿ ಮೋದಿಯವರ ತಂಡದಲ್ಲಿ ಕ್ಯಾಬಿನೆಟ್ ಸಚಿವರಾಗಿ ಯಾರೆಲ್ಲಾ ಸೇರ್ಪಡೆಯಾಗುತ್ತಿದ್ದಾರೆ ಎಂಬ ಕುತೂಹಲ ಗರಿಗೇದರಿದೆ.
ಆದರೆ ಮಹಾರಾಷ್ಟ್ರದಿಂದ ಭಾನುವಾರ ದಿನವಿಡೀ ವಿಭಿನ್ನ ಸುದ್ದಿಗಳು ಬರುತ್ತಲೇ ಇವೆ. ಮೈತ್ರಿಯಲ್ಲಿ ಭಿನ್ನಾಭಿಪ್ರಾಯಗಳು ಎದ್ದಿದ್ದವು. ಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಎನ್‌ಸಿಪಿ (ಅಜಿತ್ ಪವಾರ್) ನಮಗೆ ರಾಜ್ಯ ಸಚಿವ ಖಾತೆ ಬೇಡ ಎಂದು ಹೇಳುತ್ತಿದ್ದಾರೆ. ಎನ್‌ಸಿಪಿಯಿಂದ ಪ್ರಫುಲ್ ಪಟೇಲ್‌ಗೆ ರಾಜ್ಯ ಸಚಿವ ಸ್ಥಾನ (ಸ್ವತಂತ್ರ ಉಸ್ತುವಾರಿ) ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಅವರು ಅದನ್ನು ನಿರಾಕರಿಸಿದ್ದಾರೆ.
ಬಿಜೆಪಿಯ ಮಿತ್ರಪಕ್ಷಗಳ ಎಲ್ಲಾ ಪ್ರಮುಖರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಕರೆ ಮಾಡಲಾಗಿದೆ. ಕರೆ ಸ್ವೀಕರಿಸಿದವರು ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿದ್ದಾರೆ. ಈ ಮಧ್ಯೆ ಎನ್‌ಡಿಎ ಮಿತ್ರಪಕ್ಷ ಎನ್‌ಸಿಪಿಯಲ್ಲಿ ಸಂಪುಟ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಹೋರಾಟ ಆರಂಭವಾಗಿದೆ ಎಂಬ ಸುದ್ದಿ ಬಂದಿತ್ತು. ಆದರೆ, ಭಾನುವಾರ ಸಂಜೆ ಪರಿಸ್ಥಿತಿ ತಿಳಿಯಾಗಿದೆ. ಆದರೆ, ಎನ್‌ಸಿಪಿಯಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯವಿಲ್ಲ, ಬದಲಿಗೆ ಅವರು ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಬದಲಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನವನ್ನು ಬಯಸುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಈ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಜಿತ್ ಪವಾರ್, ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ, ಆದರೆ ಪ್ರಫುಲ್ ಪಟೇಲ್ ಅವರು ಈ ಹಿಂದೆ ಭಾರತ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿದ್ದರು. ಹೀಗಾಗಿ ರಾಜ್ಯ ಸಚಿವ ಖಾತೆ ಬೇಡ ಎಂದು ಹೇಳುತ್ತಿದ್ದೇವೆ. ಕೆಲ ಸಮಯ ಕಾಯುತ್ತೇವೆ. ಆದರೆ ಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನ ಬೇಕೆಬೇಕು ಎಂದು ಅಜಿತ್ ಪವಾರ್ ಹೇಳಿದ್ದಾರೆ.