ಚೆನ್ನೈ: ನರೇಂದ್ರ ಮೋದಿ ಅವರು ಇಂದು ಸಂಜೆ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇಶ, ವಿದೇಶದ ಆಹ್ವಾನಿತ ಗಣ್ಯರು ರಾಷ್ಟ್ರ ರಾಜಧಾನಿಗೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಪರ್ ಸ್ಟಾರ್ ರಜನಿಕಾಂತ್ ಬೆಳಗ್ಗೆ ನವದೆಹಲಿಗೆ ತೆರಳಿದರು.
ಇದಕ್ಕೂ ಮುನ್ನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇದೊಂದು ಅತ್ಯಂತ ದೊಡ್ಡ ಸಾಧನೆ. ಅವರಿಗೆ ಶುಭ ಹಾರೈಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಜನ ಕೂಡಾ ಸದೃಢ ಪ್ರತಿಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಇದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಕಾರಣವಾಗುತ್ತದೆ ಎಂದರು.
"ಆಂಧ್ರಪ್ರದೇಶ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನನಗೆ ಆಹ್ವಾನ ಬಂದಿದೆ. ಅಲ್ಲಿಗೆ ಹೋಗುವ ಬಗ್ಗೆ ನಿಮಗೆ ತಿಳಿಸುತ್ತೇನೆ ಎಂದು ಅವರು ಹೇಳಿದರು.