ನವದೆಹಲಿ: ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಮರುದಿನವಾದ ಸೋಮವಾರವೇ ಆಡಳಿತ ಕೆಲಸವನ್ನು ಆರಂಭಿಸಿದರು. ದೇಶದ ಬೆನ್ನೆಲುಬಾದ ರೈತರ ಬಗ್ಗೆ ಕೆಲಸ ಆರಂಭಿಸಿರುವ ಪ್ರಧಾನಿ ಮೋದಿ ಇಂದು ಕಚೇರಿಗೆ ಬಂದ ಕೂಡಲೇ ದೇಶದ ಸುಮಾರು 9.3 ಕೋಟಿ ರೈತರಿಗೆ 'ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಸುಮಾರು 20,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಸಮ್ಮತಿ ನೀಡುವ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು.
ನಿಧಿ ಬಿಡುಗಡೆಗೆ ಸಹಿ ಹಾಕಿದ ನಂತರ ಮೋದಿ, “ನಮ್ಮದು ಕಿಸಾನ್ ಕಲ್ಯಾಣಕ್ಕೆ ಸಂಪೂರ್ಣವಾಗಿ ಬದ್ಧವಾಗಿರುವ ಸರ್ಕಾರವಾಗಿದೆ. ಮುಂದಿನ ದಿನಗಳಲ್ಲಿ ನಾವು ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಕೆಲಸ ಮಾಡಬೇಕೆಂದು ಬಯಸುತ್ತೇವೆ ಎಂದಿದ್ದಾರೆ.
ಇಂದು ಬೆಳಗ್ಗೆ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಪಿಎಂಒ ಸಿಬ್ಬಂದಿ ಹಾಗೂ ಅಧಿಕಾರಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಪ್ರಧಾನಮಂತ್ರಿಯವರೊಂದಿಗೆ ಪಿಎಂಒ, ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ಅವರ ಪ್ರಧಾನ ಕಾರ್ಯದರ್ಶಿ ಇದ್ದರು.
ನಮ್ಮದು ರೈತರ ಕಲ್ಯಾಣಕ್ಕೆ ಸಂಪೂರ್ಣವಾಗಿ ಬದ್ಧವಾಗಿರುವ ಸರ್ಕಾರವಾಗಿದೆ. ಆದ್ದರಿಂದ ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತವು ರೈತ ಕಲ್ಯಾಣಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಕೆಲವು ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಹಿನ್ನಡೆ ಕಂಡಿದ್ದು, ಈ ನಿರ್ಧಾರವು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಚುನಾವಣೆಯ ಗೆಲುವಿನ ನಂತರ ರೈತರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ,
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೋದಿ 2.0 ಸರ್ಕಾರವು ದೇಶಾದ್ಯಂತ ರೈತರಿಂದ ಸರ್ಕಾರದ ನೀತಿ ನಿಯಮಗಳಿಂದಾಗಿ ತೀವ್ರ ವಿರೋಧ ಮತ್ತು ಪ್ರತಿಭಟನೆಯನ್ನು ಎದುರಿಸಿತ್ತು.