ಶ್ರೀನಗರ: ರಿಯಾಸಿಯಲ್ಲಿ ಯಾತ್ರಾರ್ಥಿ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಎರಡು ದಿನಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಕಥುವಾದ ಹೀರಾನಗರ ಸೆಕ್ಟರ್‌ನ ಹಳ್ಳಿಯೊಂದರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ ಮತ್ತು ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದಾರೆ.
ಇಂದು ರಾತ್ರಿ 7:45 ರ ಸುಮಾರಿಗೆ ಕಥುವಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಗೆ ಸಮೀಪವಿರುವ ಹೀರಾ ನಗರ ಸೆಕ್ಟರ್‌ನ ಸೇದಾ ಸೋಹಲ್ ಗ್ರಾಮದಲ್ಲಿ 2-3 ಭಯೋತ್ಪಾದಕರ ಗುಂಪು ಕಾಣಿಸಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಭಯೋತ್ಪಾದಕರು ಬಲವಂತವಾಗಿ ಮನೆಯೊಂದಕ್ಕೆ ನುಗ್ಗಿ ನೀರು ಕೇಳಿದರು. ಮನೆಯಲ್ಲಿದ್ದ ತಂದೆ ಮತ್ತು ಮಗ ಇಬ್ಬರೂ ಓಡಿಹೋದರು. ಈ ವೇಳೆ ಉಗ್ರರು ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು” ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಂಡಿನ ಸದ್ದು ಕೇಳಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಿದರು ಮತ್ತು ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ.
ಈ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಭಯೋತ್ಪಾದಕರು ತಪ್ಪಿಸಿಕೊಳ್ಳದಂತೆ ತಡೆಯಲು ಹೆಚ್ಚುವರಿ ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ಯೋಧರು ಧಾವಿಸಿದ್ದಾರೆ.
ಗುಂಡೇಟಿನಿಂದ ನಾಗರಿಕರೊಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ತಮ್ಮ ಮನೆಯಿಂದ ಪಲಾಯನ ಮಾಡಿದ ತಂದೆ-ಮಗ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ.