ನವದೆಹಲಿ: ನಮ್ಮ ಉದ್ದೇಶಿತ ಸಂದೇಶ ಪರಿಣಾಮಕಾರಿಯಾಗಿ ತಲುಪಿದ್ದು, ಸಾಮಾಜಿಕ ಮಾಧ್ಯಮಗಳಿಂದ 'ಮೋದಿ ಕಾ ಪರಿವಾರ್' ಎಂಬ ಟ್ಯಾಗ್ ಅನ್ನು ತೆಗೆದುಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
ಇತ್ತೀಚಿಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯುದ್ದಕ್ಕೂ ಮೋದಿ ಕಾ ಪರಿವಾರ್' ಅಭಿಯಾನ ಬೆಂಬಲಿಸಿದವರಿಗೆ ಧನವಾದ ಹೇಳಿದ ಪ್ರಧಾನಿ ಮೋದಿ, ಸಾಮಾಜಿಕ ಜಾಲತಾಣಗಳಿಂದ ಈ ಘೋಷವನ್ನು ತೆಗೆಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿಗೆ ಕುಟುಂಬವೇ ಇಲ್ಲ ಎಂದು ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಹೇಳಿದ್ದರು. ಬಿಜೆಪಿ ಸದಸ್ಯರು ಮತ್ತು ಅವರ ಬೆಂಬಲಿಗರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿ ಕಾ ಪರಿವಾರ್ ಎಂಬ ಟ್ಯಾಗ್ ಹಾಕಿಕೊಳ್ಳುವ ಮೂಲಕ ಲಾಲುಗೆ ತಿರುಗೇಟು ನೀಡಿದ್ದರು.
ಇಂದು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, "ಲೋಕಸಭೆ ಚುನಾವಣೆಯುದ್ದಕ್ಕೂ ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ 'ಮೋದಿ ಕಾ ಪರಿವಾರ್' ಎಂಬ ಟ್ಯಾಗ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮಕ್ಕೆ ಸೇರಿಸಿಕೊಂಡಿದ್ದಾರೆ. ನಾನು ಅದರಿಂದ ಸಾಕಷ್ಟು ಶಕ್ತಿಯನ್ನು ಪಡೆದುಕೊಂಡಿದ್ದೇನೆ. ಭಾರತವು ಸತತ ಮೂರನೇ ಬಾರಿಗೆ ಎನ್‌ಡಿಎಗೆ ಬಹುಮತವನ್ನು ನೀಡಿದೆ. ಇದು ಒಂದು ರೀತಿಯ ದಾಖಲೆಯಾಗಿದೆ ಮತ್ತು ನಮ್ಮ ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡಲು ನಮಗೆ ಜನಾದೇಶವನ್ನು ನೀಡಿದೆ.
"ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಲಾಗಿದೆ. ನಾನು ಮತ್ತೊಮ್ಮೆ ಭಾರತದ ಜನರಿಗೆ ಧನ್ಯವಾದ ಹೇಳುತ್ತೇನೆ ಮತ್ತು ಈಗ ನಿಮ್ಮ ಸಾಮಾಜಿಕ ಮಾಧ್ಯಮಗಳಿಂದ 'ಮೋದಿ ಕಾ ಪರಿವಾರ್' ಅನ್ನು ತೆಗೆದುಹಾಕುವಂತೆ ವಿನಂತಿಸುತ್ತೇನೆ ಎಂದಿದ್ದಾರೆ.