ಭುವನೇಶ್ವರ: ನಾಲ್ಕು ಬಾರಿ ಶಾಸಕರಾಗಿರುವ ಬುಡಕಟ್ಟು ನಾಯಕ ಮೋಹನ್ ಚರಣ್ ಮಾಝಿ ಅವರು ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ಸಂಜೆ ಭುವನೇಶ್ವರದ ಜನತಾ ಮೈದಾನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ರಘುಬರ್ ದಾಸ್ ಅವರು ಮೋಹನ್ ಮಾಝಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮಾಝಿ ಅವರೊಂದಿಗೆ ಬಿಜೆಪಿ ಹಿರಿಯ ನಾಯಕ ಮತ್ತು ಪಟ್‌ನಗರ ಶಾಸಕ ಕೆವಿ ಸಿಂಗ್ ದೇವು ಮತ್ತು ನಿಮಾಪಾರ ವಿಧಾನಸಭಾ ಕ್ಷೇತ್ರದ ಶಾಸಕ ಪರವತಿ ಪರಿದಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಾಝಿ ಅವರು 2000, 2004, 2019 ಮತ್ತು 2024 ರಲ್ಲಿ ಕಿಯೋಂಜಾರ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ ಬಿಜೆಪಿಯ ಮುಖ್ಯ ಸಚೇತಕರಾಗಿ ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಭೂಪೇಂದರ್ ಯಾದವ್, ಧರ್ಮೇಂದ್ರ ಪ್ರಧಾನ್, ಜುಯಲ್ ಓರಮ್, ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಒಡಿಶಾದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರ ಬಂದಿದೆ.