ಕೊಲ್ಹಾಪುರ: ಚಲಿಸುತ್ತಿದ್ದ ರೈಲಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ 'ಮಹಾಲಕ್ಷ್ಮಿ' ಎಂದು ನಾಮಕರಣ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು.. ಕೋಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ನಲ್ಲಿ ಈ ಘಟನೆ ನಡೆದಿದ್ದು, ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ನಲ್ಲಿ ಜನಿಸಿದ ಮಗುವಿಗೆ ಮಹಾಲಕ್ಷ್ಮಿ ಎಂದು ದಂಪತಿ ಹೆಸರಿಟ್ಟಿದ್ದಾರೆ.
ಮೂಲಗಳ ಪ್ರಕಾರ ಜೂನ್ 6ರಂದು ಕೋಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ನಲ್ಲಿ ಮೀರಾ ರೋಡ್ ನ ಫಾತಿಮಾ ಖಾತುನ್ ಎಂಬ 31 ವರ್ಷದ ಗರ್ಭಿಣಿ ಪ್ರಯಾಣಿಸುತ್ತಿದ್ದರು. ಆ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವಿಚಾರ ಮಹಿಳೆ ತನ್ನ ಪತಿಗೆ ತಿಳಿಸಿದ್ದಾಳೆ.
ನೋವು ಹೆಚ್ಚಾದ ಕಾರಣ ರೈಲಿನಲ್ಲಿರುವ ಶೌಚಾಲಯಕ್ಕೆ ತೆರಳಿದ್ದು, ಬಳಿಕ ರೈಲು ಲೋನಾವಾಲಾ ದಾಟಿದ ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ಆಕೆಗೆ ಸಹಾಯ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಹಿಳೆಯ ಪತಿ ತಯ್ಯಬ್ ಕರ್ಜಾತ್ ಸರ್ಕಾರಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತಾಯಿ ಮಗುವನ್ನು ರೈಲಿನಿಂದ ಕೆಳಗಿಳಿಸಿ ಹತ್ತಿರವಿದ್ದ ಉಪಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ಸಿಬ್ಬಂದಿಗಳು ತಾಯಿ, ಮಗುವಿಗೆ ಅಗತ್ಯವಿರುವ ಚಿಕಿತ್ಸೆ ನೀಡಿ ಮೂರು ದಿನಗಳ ನಂತರ ಡಿಸ್ಚಾರ್ಜ್ ಮಾಡಿದ್ದಾರೆ. ನಂತರ ಆ ಮುಸ್ಲಿಂ ದಂಪತಿ ಮಗುವಿಗೆ ‘ಮಹಾಲಕ್ಷ್ಮಿ’ ಎಂದು ಹಿಂದೂ ದೇವರ ಹೆಸರನ್ನು ಇಟ್ಟು ಕುತೂಹಲ ಮೂಡಿಸಿದ್ದಾರೆ.
ಈ ಬಗ್ಗೆ ಮಗುವಿನ ತಂದೆ ತಯ್ಯಬ್ ಕರ್ಜಾತ್ ಅವರು ಪ್ರತಿಕ್ರಿಯಿಸಿ, ತಿರುಪತಿಯಿಂದ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಯಾಣಿಸಿದ ಕೆಲವು ಸಹ ಪ್ರಯಾಣಿಕರು ತನ್ನ ಮಗಳು ಈ ರೈಲಿನಲ್ಲಿ ಹುಟ್ಟಿದ್ದು, ದೇವಿಯ ದರ್ಶನ ಪಡೆದಂತೆ ಆಯಿತು ಎಂದರು. ಹಾಗಾಗಿ ತಾನು ಮಗುವಿಗೆ ಈ ಹೆಸರಿಟ್ಟೆ ಎಂದು ತಿಳಿಸಿದ್ದಾರೆ.