ಮಂಡ್ಲಾ: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗೋಮಾಂಸ ಮಾರಾಟದ ವಿರುದ್ಧದ ಕ್ರಮದ ಭಾಗವಾಗಿ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಮಾಂಡ್ಲಾದಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ್ದ 11 ವ್ಯಕ್ತಿಗಳ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ನೈನ್‌ಪುರದ ಭೈನ್‌ವಾಹಿ ಪ್ರದೇಶದಲ್ಲಿ ಮಾಂಸ ಮಾರಾಟಕ್ಕಾಗಿ ಹೆಚ್ಚಿನ ಸಂಖ್ಯೆಯ ಹಸುಗಳನ್ನು ಕೂಡಿಡಲಾಗಿದೆ ಎಂಬ ಸುಳಿವು ದೊರೆತ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡ್ಲಾ ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಕ್ಲೇಚಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
'ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದಾಗ ಆರೋಪಿಗಳ ಹಿತ್ತಲಿನಲ್ಲಿ ಕಟ್ಟಿಹಾಕಲಾಗಿದ್ದ 150 ಹಸುಗಳು ಪತ್ತೆಯಾಗಿವೆ. ಎಲ್ಲ 11 ಆರೋಪಿಗಳ ಮನೆಗಳಲ್ಲಿನ ರೆಫ್ರಿಜರೇಟರ್‌ಗಳಿಂದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಕೊಠಡಿಯೊಂದರಲ್ಲಿ ಹಸುಗಳ ಕೊಬ್ಬು, ಚರ್ಮ ಮತ್ತು ಮೂಳೆಗಳನ್ನು ಇಟ್ಟಿರುವುದು ಸಹ ಪತ್ತೆಯಾಗಿದೆ' ಎಂದು ಅವರು ಹೇಳಿದರು.
'ಸ್ಥಳೀಯ ಸರ್ಕಾರಿ ಪಶುವೈದ್ಯರು ಆರೋಪಿಗಳ ಮನೆಗಳಿಂದ ವಶಪಡಿಸಿಕೊಂಡ ಮಾಂಸವು ಗೋಮಾಂಸ ಎಂದು ದೃಢಪಡಿಸಿದ್ದಾರೆ. ದ್ವಿತೀಯ ಡಿಎನ್‌ಎ ವಿಶ್ಲೇಷಣೆಗಾಗಿ ನಾವು ಹೈದರಾಬಾದ್‌ಗೆ ಮಾದರಿಗಳನ್ನು ಕಳುಹಿಸಿದ್ದೇವೆ. 11 ಆರೋಪಿಗಳ ಮನೆಗಳು ಸರ್ಕಾರಿ ಭೂಮಿಯಲ್ಲಿದ್ದದ್ದರಿಂದ ಅವುಗಳನ್ನು ನೆಲಸಮ ಮಾಡಲಾಗಿದೆ' ಎಂದು ಎಸ್‌ಪಿ ಹೇಳಿದರು.
ಶುಕ್ರವಾರ ರಾತ್ರಿ ಹಸುಗಳು ಮತ್ತು ದನದ ಮಾಂಸವನ್ನು ವಶಪಡಿಸಿಕೊಂಡ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ 10 ಮಂದಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
'ಸದ್ಯ ವಶಕ್ಕೆ ಪಡೆದಿರುವ 150 ಹಸುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ಭೈನಸ್ವಾಹಿ ಪ್ರದೇಶವು ಕೆಲವು ಸಮಯದಿಂದ ಹಸು ಕಳ್ಳಸಾಗಣೆಯ ಕೇಂದ್ರವಾಗಿತ್ತು. ಮಧ್ಯ ಪ್ರದೇಶದಲ್ಲಿ ಗೋಹತ್ಯೆ ಮಾಡುವುದು ಅಪರಾಧವಾಗಿದ್ದು, ಏಳು ವರ್ಷಗಳ ಜೈಲು ಶಿಕ್ಷೆಗೆ ಅರ್ಹವಾಗಿದೆ' ಎಂದು ಸಕ್ಲೇಚಾ ತಿಳಿಸಿದರು.
ಇಬ್ಬರು ಆರೋಪಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಸಂಗ್ರಹಿಸಲಾಗಿದ್ದು, ಉಳಿದ ವ್ಯಕ್ತಿಗಳ ಪೂರ್ವಾಪರಗಳನ್ನು ಕಂಡುಹಿಡಿಯಲು ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳೆಲ್ಲರೂ ಮುಸ್ಲಿಮರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.