ಮೇದಕ್: ಗೋವುಗಳನ್ನು ಸಾಗಿಸಿದ ಆರೋಪದ ಮೇಲೆ ಮೇದಕ್‌ನಲ್ಲಿ ಕೋಮುಗಲಭೆ ನಡೆದ ಒಂದು ದಿನದ ನಂತರ, ಶನಿವಾರದ ಗಲಭೆಗೆ ಸಂಬಂಧಿಸಿದಂತೆ ಒಂಬತ್ತು ಬಿಜೆಪಿ ಕಾರ್ಯಕರ್ತರು ಮತ್ತು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ನಾಲ್ವರು ಸೇರಿದಂತೆ 13 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ತನಿಖೆ ಮುಂದುವರಿದಂತೆ ಮತ್ತಷ್ಟು ಜನರ ಬಂಧನವಾಗಬಹುದು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ರಾಜೇಶ್ ಸೂಚಿಸಿದ್ದಾರೆ. ಬಂಧಿತರಲ್ಲಿ ಮೇದಕ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ ಶ್ರೀನಿವಾಸ್, ಬಿಜೆಪಿ ಮೇದಕ್ ಪಟ್ಟಣ ಅಧ್ಯಕ್ಷ ಎಂ ನಯಾಂ ಪ್ರಸಾದ್, ಬಿಜೆವೈಎಂ ಜಿಲ್ಲಾಧ್ಯಕ್ಷ ಸತೀಶ್ ಸೇರಿದ್ದಾರೆ.
ಶನಿವಾರದ ಘಟನೆಯನ್ನು ಖಂಡಿಸಿ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಕರೆ ನೀಡಿದ ನಂತರ ಮೇದಕ್‌ನಲ್ಲಿ ಭಾನುವಾರ ಸಂಪೂರ್ಣ ಬಂದ್ ಆಚರಿಸಲಾಯಿತು. ಬಿಜೆಪಿಯ ಬಂದ್ ಕರೆ ನಂತರ ವಾಣಿಜ್ಯ ಸಂಸ್ಥೆಗಳು, ಪೆಟ್ರೋಲ್ ಬಂಕ್‌ಗಳು, ಹೋಟೆಲ್‌ಗಳು, ಚಿತ್ರಮಂದಿರಗಳು ಮತ್ತು ಸಣ್ಣ ಅಂಗಡಿಗಳು ಮುಚ್ಚಲ್ಪಟ್ಟವು. ಯಾವುದೇ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಸೋಮವಾರ ಬಕ್ರೀದ್ ಹಬ್ಬ ಇರುವುದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಐಜಿಪಿ ರಂಗನಾಥ್ ಅವರು ಮೇದಕ್‌ನಲ್ಲಿ ಭಾನುವಾರ ಶಾಂತಿ ಸಮಿತಿ ಸಭೆ ನಡೆಸಿದ್ದು, ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಆಹ್ವಾನಿಸಿದ್ದರು ಮತ್ತು ಯಾವುದೇ ಸಮಸ್ಯೆಗಳಿದ್ದರೆ ಹಿಂಸಾಚಾರಕ್ಕೆ ಮುಂದಾಗದೆ ಪೊಲೀಸರ ಗಮನಕ್ಕೆ ತರುವಂತೆ ಸಲಹೆ ನೀಡಿದರು.
ಕಳೆದ ರಾತ್ರಿ ಅನ್ಯ ಸಮುದಾಯದ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ವ್ಯಕ್ತಿಗಾಗಿ ಪೊಲೀಸರು ಸದ್ಯ ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದೇ ಶನಿವಾರ ನಡೆದ ಘರ್ಷಣೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗೋಹತ್ಯೆ ಆರೋಪದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹಲವು ದಿನಗಳಿಂದ ಬಿಜೆಪಿ ಮುಖಂಡರು ಮತ್ತು ಅಂಗಸಂಸ್ಥೆಗಳು ಒತ್ತಾಯಿಸುತ್ತಿವೆ.
ಶನಿವಾರ ಬಿಜೆಪಿ ಹಾಗೂ ಬಜರಂಗದಳ ಕಾರ್ಯಕರ್ತರು ಜಂಬಿಕುಂಟಾದಲ್ಲಿ ಗೋವುಗಳನ್ನು ಪತ್ತೆ ಹಚ್ಚಿ, ಬಿಡಿಸಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಅನ್ಯ ಸಮುದಾಯದ ಯುವಕರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಉದ್ವಿಗ್ನತೆಗೆ ಕಾರಣವಾಯಿತು. ಮೇದಕ್ ಕೋಮು ಘರ್ಷಣೆಗೆ ಒಳಗಾಗುವ ಸೂಕ್ಷ್ಮ ಪ್ರದೇಶ ಎಂದು ತಿಳಿದಿದ್ದರೂ, ಪೊಲೀಸರ ನಿರ್ಲಕ್ಷ್ಯದಿಂದ ಪರಿಸ್ಥಿತಿ ಹದಗೆಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಟ್ಟಣದಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದ್ದರೂ, ಸಂಭಾವ್ಯ ಹಿಂಸಾಚಾರದ ಬಗ್ಗೆ ನಿವಾಸಿಗಳು ಚಿಂತಿತರಾಗಿದ್ದಾರೆ.