ಗುವಾಹಟಿ: ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಇಲಾಖೆಯ ಕಾರ್ಯದರ್ಶಿ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಶಿಲಾದಿತ್ಯ ಚೇಟಿಯಾ ಅವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರ ಪತ್ನಿ ಆಸ್ಪತ್ರೆಯಲ್ಲಿ ನಿಧನರಾದ ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಯ ಸಾವಿನ ಬಗ್ಗೆ ಮಾಹಿತಿ ನೀಡಿದ ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಅವರು, ಶಿಲಾದಿತ್ಯ ಚೇಟಿಯಾ ಅವರ ಪತ್ನಿ ಕ್ಯಾನ್ಸರ್‌ನಿಂದ ಮೃತಪಟ್ಟ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
"ದುರದೃಷ್ಟಕರ ಘಟನೆಯೊಂದರಲ್ಲಿ, ಅಸ್ಸಾಂನ ಗೃಹ ಮತ್ತು ರಾಜಕೀಯ ಸರ್ಕಾರದ ಕಾರ್ಯದರ್ಶಿ ಶಿಲಾದಿತ್ಯ ಚೇಟಿಯಾ ಅವರು ಇಂದು ಸಂಜೆ ಸಾವಿಗೆ ಶರಣಾಗಿದ್ದಾರೆ. ದೀರ್ಘಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರ ಪತ್ನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಅಧಿಕಾರಿಯ ಪತ್ನಿ ಮೃತಪಟ್ಟಿರುವುದಾಗಿ ಘೋಷಿಸಿದ ಕೆಲವೇ ನಿಮಿಷಗಳ ನಂತರ ಈ ಘಟನೆ ನಡೆದಿದ್ದು, ಇಡೀ ಅಸ್ಸಾಂ ಪೊಲೀಸ್ ಕುಟುಂಬ ತೀವ್ರ ದುಃಖದಲ್ಲಿದೆ ಎಂದು ಅಸ್ಸಾಂ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಉನ್ನತ ಅಧಿಕಾರಿಯ ಪತ್ನಿಯು ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಚೇತಿಯಾ ಅವರು ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.