ದೆಹಲಿ: Heatwave ಗೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿದ್ದು, 5 ಮಂದಿ ಸಾವನ್ನಪ್ಪಿದ್ದರೆ, 12 ಮಂದಿಯ ಆರೋಗ್ಯ ಚಿಂತಾಜನಕವಾಗಿದೆ.
ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಅಸ್ವಸ್ಥಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯ ಹಲವು ಆಸ್ಪತ್ರೆಗಳಲ್ಲಿ ಜನತೆ ಶಾಖಾಘಾತದಿಂದ ಅಸ್ವಸ್ಥಗೊಂಡು ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚಾಗತೊಡಗಿವೆ.
ಶಾಖಾಘಾತದಿಂದ ಒಟ್ಟು 22 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರೆ, ಈ ಪೈಕಿ 12-13 ಮಂದಿ ಸಾವನ್ನಪ್ಪಿದ್ದು, 5 ಮಂದಿ ವೆಂಟಿಲೇಟರ್ ಸಹಾಯದಲ್ಲಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಜಯ್ ಶುಕ್ಲಾ ಹೇಳಿದ್ದಾರೆ.
ಶಾಖಾಘಾತದಿಂದ ಸಾವನ್ನಪ್ಪುವ ಸಾಧ್ಯತೆಗಳು ಶೇ.60-70 ರಷ್ಟಿದ್ದು, ರೋಗಿಯನ್ನು ತಡವಾಗಿ ಆಸ್ಪತ್ರೆಗೆ ಕರೆತಂದರೆ, ಒಂದರ ನಂತರ ಒಂದು ಅಂಗವು ವಿಫಲಗೊಳ್ಳಲು ಪ್ರಾರಂಭಿಸುತ್ತದೆ. ಈ ಬಗ್ಗೆ ಅತ್ಯಂತ ಕಡಿಮೆ ಜಾಗೃತಿ ಇದ್ದು, ಶಾಖಾಘಾತಕ್ಕೆ ತುತ್ತಾಗಿರುವ ಹಲವು ರೋಗಿಗಳು ವಲಸೆ ಕಾರ್ಮಿಕರಾಗಿದ್ದಾರೆ. ಅಲ್ಲದೆ, ರೋಗಲಕ್ಷಣಗಳು (ಹೀಟ್ ಸ್ಟ್ರೋಕ್) ಸುಲಭವಾಗಿ ತಿಳಿಯಲು ಸಾಧ್ಯವಾಗದೇ ತಪ್ಪಿಸಿಕೊಳ್ಳಬಹುದು ಅಥವಾ ಬೇರೆ ಯಾವುದಕ್ಕಾದರೂ ತಪ್ಪಾಗಿ ಗ್ರಹಿಸಬಹುದು. ರೋಗಿಗಳು ಮೂರ್ಛೆ ಹೋದಾಗ ಮಾತ್ರ ಅವರ ಸಂಬಂಧಿಕರು ಆಸ್ಪತ್ರೆಗೆ ಸೇರಿಸುವ ಅಗತ್ಯವಿದೆ ಎಂದು ಭಾವಿಸುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಹೀಟ್ ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಡಾ.ಶುಕ್ಲಾ ಹೇಳಿದ್ದಾರೆ. "ನಾವು ಜನರಿಗೆ ತಿಳುವಳಿಕೆ ನೀಡಬೇಕಾಗಿದೆ, ಒಬ್ಬ ವ್ಯಕ್ತಿಯು ಶಾಖದ ಹೊಡೆತದಿಂದ ಬಳಲುತ್ತಿದ್ದಾನೆ ಎಂದು ನೀವು ಅನುಮಾನಿಸಿದರೆ ಆಸ್ಪತ್ರೆಗೆ ಧಾವಿಸುವ ಬದಲು, ನೀವು ಅಲ್ಲಿಯೇ ಚಿಕಿತ್ಸೆ ಪ್ರಾರಂಭಿಸಬೇಕು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸುವಾಗ ನೀರು, ಐಸ್ ಬಳಸಿ. ಆಂಬ್ಯುಲೆನ್ಸ್‌ಗಳನ್ನು ಸಹ ಸುಸಜ್ಜಿತಗೊಳಿಸಲಾಗಿದೆ ಇದರಿಂದ ರೋಗಿಗಳು ಆಂಬುಲೆನ್ಸ್ ತಲುಪಿದ ತಕ್ಷಣ ತಣ್ಣಗಾಗಲು ಪ್ರಾರಂಭಿಸಬಹುದು ಎಂದು ಹೇಳಿದ್ದಾರೆ.
ಇನ್ನು ದೆಹಲಿಯಲ್ಲಿ ರಾತ್ರಿ ವೇಳೆಯೇ ತಾಪಮಾನ 35 ಡಿಗ್ರಿ ತಲುಪಿದ್ದು ಸಾಮಾನ್ಯ ತಾಪಮಾನಕ್ಕಿಂತ ಇದು ಹಲವು ಡಿಗ್ರಿಗಳಷ್ಟು ಹೆಚ್ಚಾಗಿದ್ದು, ವಾತಾವರಣವನ್ನು ತಂಪು ಮಾಡುವುದಕ್ಕೆ ಏರ್ ಕೂಲರ್ ಗಳಿಂದಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂದಿನ 24 ಗಂಟೆಗಳ ಕಾಲ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಶಾಖದ ಅಲೆಗಳು ಮುಂದುವರಿಯುವ ಸಾಧ್ಯತೆಯಿದೆ ಮತ್ತು ಅದರ ನಂತರ ಕಡಿಮೆಯಾಗುತ್ತದೆ ಎಂದು ಹವಾಮಾನ ಕಚೇರಿ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.