ತಿರುವನಂತಪುರ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮೋದಿ ಸಂಪುಟಕ್ಕೆ ಸೇರಿದ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಅಧಿಕೃತ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದಿಂದ ದೂರ ಉಳಿಯಲು ಹಾಗೂ ಹೊಸ ಪಕ್ಷ ಸ್ಥಾಪಿಸಲು ಕೇರಳ ಜೆಡಿಎಸ್ ನಿರ್ಧರಿಸಿದೆ.
ಆದಾಗ್ಯೂ, ಸಚಿವ ಸೇರಿದಂತೆ ಪಕ್ಷದ ಇಬ್ಬರು ಶಾಸಕರು ಅನರ್ಹಗೊಳ್ಳುವ ಭೀತಿಯಿಂದ ಹೊಸ ಪಕ್ಷದ ಸದಸ್ಯತ್ವ ಪಡೆಯದಿರಲು ತೀರ್ಮಾನಿಸಿದ್ದಾರೆ. ಜೆಡಿಎಸ್ ನಾಯಕರು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಲು ನಿರ್ಧರಿಸಿದಾಗಿನಿಂದ, ಕೇರಳ ಘಟಕದಲ್ಲಿ ಅಸಮಾಧಾನ ಮೂಡಿತ್ತು.
ಸಿಪಿಎಂ ನೇತೃತ್ವದ 'ಎಲ್‌ಡಿಎಫ್' ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕೇರಳ ಜೆಡಿಎಸ್‌ಗೆ, ರಾಜ್ಯದಲ್ಲಿ ಮೈತ್ರಿ ಉಳಿಸಿಕೊಳ್ಳುವ ಒತ್ತಡ ಎದುರಾಗಿತ್ತು. ಮೈತ್ರಿಕೂಟದ ಮಿತ್ರ ಪಕ್ಷಗಳು ಜೆಡಿಎಸ್ ನಡೆಯನ್ನು ಟೀಕಿಸಲಾರಂಭಿಸಿದ್ದವು. ಪಕ್ಷದ ನಾಯಕರೂ ಆಗಿರುವ ಕರ್ನಾಟಕದ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಸೇರಿದ ಬಳಿಕ ಅದು ಇನ್ನಷ್ಟು ಹೆಚ್ಚಾಗಿತ್ತು. ಹೀಗಾಗಿ ಮಂಗಳವಾರ ಸಭೆ ನಡೆಸಿದ ಕೇರಳ ಜೆಡಿಎಸ್ ನಾಯಕರು, ಹೊಸ ಪಕ್ಷ ರಚಿಸಲು ತೀರ್ಮಾನಿಸಿದ್ದಾರೆ. ಅನರ್ಹತೆಯ ಭೀತಿಯಿಂದಾಗಿ, ಪಕ್ಷದ ಇಬ್ಬರು ಶಾಸಕರು ಹೊಸ ಪಕ್ಷದಲ್ಲಿ ಅಧಿಕೃತವಾಗಿ ಯಾವುದೇ ಸ್ಥಾನ ಪಡೆಯದಿರಲು ನಿರ್ಧರಿಸಿದ್ದಾರೆ. ಸದ್ಯಕ್ಕೆ ಅವರು ಅಧಿಕೃತ ಪಕ್ಷದಲ್ಲೇ ಉಳಿಯಲಿದ್ದಾರೆ.
ಜೆಡಿಎಸ್‌ನ ಕೇರಳ ಘಟಕವು ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್‌ನ ಭಾಗವಾಗಿದೆ. ಇಂಧನ ಸಚಿವ ಕೆ.ಕೃಷ್ಣನ್ ಕುಟ್ಟಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಸಚಿವ ಮ್ಯಾಥ್ಯೂ ಟಿ.ಥಾಮಸ್ ಅವರು ಕೇರಳ ವಿಧಾನಸಭೆಗೆ ಜೆಡಿಎಸ್‌ನಿಂದ ಆಯ್ಕೆಯಾಗಿದ್ದಾರೆ. ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಕ್ಯಾಬಿನೆಟ್‌ನಲ್ಲಿ ಕೆ. ಕೃಷ್ಣನ್‌ಕುಟ್ಟಿ ಸಹ ಸಚಿವರಾಗಿದ್ದಾರೆ.
ಕೇರಳ ಘಟಕಕ್ಕೂ ಜೆಡಿಎಸ್ ರಾಷ್ಟ್ರೀಯ ಘಟಕಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಂಬಂಧವು ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿದೆ ಮತ್ತು ಕೇರಳ ಘಟಕವು ಸ್ವಲ್ಪ ಸಮಯದಿಂದ ವಿಭಿನ್ನ ರಾಜಕೀಯ ತತ್ವದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಸಚಿವ ಥಾಮಸ್ ಹೇಳಿದರು.