ಚೆನ್ನೈ: ಫುಟ್ಪಾತ್ ಮೇಲೆ ಮಲಗಿದ್ದ ವ್ಯಕ್ತಿ ಮೇಲೆ ಸಂಸದರೊಬ್ಬರ ಮಗಳು ಕಾರು ಹರಿಸಿ ಕೊಂದು ಹಾಕಿದ್ದು, ಆಕೆ ''ಸ್ಟೇಷನ್ ಜಾಮೀನಿ''ನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸಂಸದ ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಚೆನ್ನೈನಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಾರು ಹತ್ತಿಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಆಕೆಯನ್ನು ಚೆನ್ನೈ ಪೊಲೀಸರು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ಬಿಡಾ ಮಸ್ತಾನ್ ರಾವ್ ಅವರ ಪುತ್ರಿ ಹೆಸರು ಕೇಳಿಬರುತ್ತಿದ್ದು, ಈ ಘಟನೆಯಲ್ಲಿ ಸೂರ್ಯ ಎನ್ನುವ 21ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಾಧುರಿಯನ್ನು ಚೆನ್ನೈನ ಪೊಲೀಸರು ಮಂಗಳವಾರ ಬಂಧಿಸಿದ್ದರು. ಆದರೆ ಅದೇ ದಿನ ಅವರಿಗೆ ಜಾಮೀನು ಸಿಕ್ಕಿದ್ದು, ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಈ ಕ್ರಮ ಇದೀಗ ಜನರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಫುಟ್ ಪಾತ್ನಲ್ಲಿ ಮಲಗಿದ್ದ ವ್ಯಕ್ತಿಯನ್ನು ನುಜ್ಜುಗುಜ್ಜುಗೊಳಿಸಿತ್ತು. ಇದರಿಂದಾಗಿ ಆತ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಮಾಧುರಿ ತಕ್ಷಣವೇ ಸ್ಥಳದಿಂದ ಓಡಿಹೋಗಿದ್ದಾರೆ ಎಂಬುದು ತಿಳಿದುಬಂದಿದೆ. ಆದರೆ ಅವರ ಸ್ನೇಹಿತರೊಬ್ಬರು ಕಾರಿನಿಂದ ಇಳಿದು ಅಪಘಾತದ ನಂತರ ಜಮಾಯಿಸಿದ ಜನರೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ನಂತರ ಆತನೂ ಸ್ವಲ್ಪ ಸಮಯದ ನಂತರ ಅಲ್ಲಿಂದ ಹೊರಟು ಹೋದನು. ಗುಂಪಿನಲ್ಲಿದ್ದ ಕೆಲವರು ಸೂರ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದರು.
ಮೃತ ವ್ಯಕ್ತಿಯ ಪತ್ನಿಯಿಂದ ದೂರು
ಸೂರ್ಯ ಮದುವೆಯಾಗಿ ಕೇವಲ 8 ತಿಂಗಳು ಕಳೆದಿತ್ತು. ಆತನ ಸಂಬಂಧಿಕರು ಮತ್ತು ನೆರೆಹೊರೆಯವರು ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಚೆನ್ನೈನ ಬೆಸೆಂಟ್ ನಗರ ಪ್ರದೇಶದ ಪಾದಚಾರಿ ಮಾರ್ಗದ ಬಳಿ ಕುಡಿದು ರಸ್ತೆಬದಿಯಲ್ಲಿ ಮಲಗಿದ್ದ ಎನ್ನಲಾಗಿದೆ. ಸೂರ್ಯ ಅವರ ಪತ್ನಿ ವಿನಿತಾ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 304 (ಎ) (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.