ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಗುರುವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರ "ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದು, ಪ್ರೀತಿಯ ಸಂಪರ್ಕವನ್ನು ಖಾತ್ರಿಪಡಿಸುತ್ತದೆ ಎಂದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ತಮ್ಮ ಸರ್ಕಾರದ ಕಠಿಣ ಪರಿಶ್ರಮದಿಂದಾಗಿ ಜಮ್ಮು ಮತ್ತು ಕಾಶ್ಮೀರವು ಉತ್ತಮವಾಗಿ ಬದಲಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಶ್ರೀನಗರದಲ್ಲಿ 1,500 ಕೋಟಿ ರೂ.ಗಳ 84 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಈ ವಿಷಯ ತಿಳಿಸಿದರು. ಯೋಜನೆಗಳು ವಿವಿಧ ಕ್ಷೇತ್ರಗಳನ್ನು ವ್ಯಾಪಿಸಿವೆ ಮತ್ತು ಈ ಪ್ರದೇಶದಲ್ಲಿ ಮೂಲಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರಿ ಉದ್ಯೋಗಗಳಿಗಾಗಿ 2,000 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ, ಈ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು.
ಸತತ ಮೂರನೇ ಅವಧಿಗೆ ಸರ್ಕಾರವನ್ನು ಆಯ್ಕೆ ಮಾಡಿದ ಭಾರತೀಯರು ಜಗತ್ತಿಗೆ ಮಹತ್ವದ ಸಂದೇಶ ಎಂದು ಸಾರಿದ್ದಾರೆ. ಇತ್ತೀಚೆಗಿನ ಲೋಕಸಭೆ ಚುನಾವಣೆ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಮತದಾನವಾಗಿದ್ದು, ಇದಕ್ಕೆ ಯುವಕರ ಪ್ರಜಾಪ್ರಭುತ್ವದ ಬದ್ಧತೆಯೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 370ನೇ ವಿಧಿಯ ರದ್ದತಿಯ ಮಹತ್ವವನ್ನು ಒತ್ತಿ ಹೇಳಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ಸಂಪೂರ್ಣ ಅನುಷ್ಠಾನವು ಈ ಪ್ರದೇಶಕ್ಕೆ ಹೊಸ ಅವಕಾಶಗಳು ಮತ್ತು ಬೆಳವಣಿಗೆಯನ್ನು ತಂದಿದೆ ಎಂದು ಹೇಳಿದರು.
"ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರ ಗೋಡೆ ಕುಸಿದಿದೆ ಮತ್ತು ಸಂವಿಧಾನದ ಫಲವನ್ನು ಖಾತ್ರಿಪಡಿಸಲಾಗಿದೆ. ಇಂದು ಭಾರತೀಯ ಸಂವಿಧಾನ ನಿಜವಾಗಿಯೂ ಜಾರಿಗೆ ಬಂದಿದೆ" ಎಂದು ಪ್ರಧಾನಿ ಮೋದಿ ಹೇಳಿದರು.