ಪಾಟ್ನಾ: 2024 ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET)ಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ನಡುವೆ, ಸಮಸ್ತಿಪುರದ ಅಭ್ಯರ್ಥಿಯೊಬ್ಬರು ಈ ವರ್ಷದ ಮೇನಲ್ಲಿ ನಡೆದ ಪರೀಕ್ಷೆಗೆ ಒಂದು ದಿನ ಮೊದಲು ತನ್ನ ಚಿಕ್ಕಪ್ಪನಿಂದ ಸೋರಿಕೆಯಾದ ಪ್ರಶ್ನೆ ಪತ್ರಿಕೆ ಪಡೆದಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
22 ವರ್ಷದ ಅನುರಾಗ್ ಯಾದವ್ ಪಾಟ್ನಾ ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆ ಪತ್ರದಲ್ಲಿ, ಪರೀಕ್ಷೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿ ತನ್ನ ಚಿಕ್ಕಪ್ಪ ರಾಜಸ್ಥಾನದ ಕೋಟಾದಿಂದ ಬಿಹಾರದ ಸಮಸ್ತಿಪುರ್‌ಗೆ ಕರೆಸಿಕೊಂಡಿದ್ದರು ಎಂದು ಹೇಳಿದ್ದಾರೆ.
ಅನುರಾಗ್ ಯಾದವ್ ಅವರ ಚಿಕ್ಕಪ್ಪ ಸಿಕಂದರ್ ಪ್ರಸಾದ್ ಯಾದವೆಂದು, ಬಿಹಾರದ ದಾನಪುರ ಟೌನ್ ಕೌನ್ಸಿಲ್(ದಾನಪುರ ನಗರ ಪರಿಷತ್) ನಲ್ಲಿ ಎಂಜಿನಿಯರ್ ಆಗಿದ್ದು, ಸಮಸ್ತಿಪುರಕ್ಕೆ ಹಿಂತಿರುಗುವಂತೆ ಕೇಳಿಕೊಂಡಿದ್ದಾರೆ.
ಮೇ 5 ರಂದು ನಡೆದ ಪರೀಕ್ಷೆಯ ಮುನ್ನಾದಿನದಂದು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ತನಗೆ ನೀಡಲಾಗಿತ್ತು ಮತ್ತು ಉತ್ತರಗಳನ್ನು ನೆನಪಿಟ್ಟುಕೊಳ್ಳುವಂತೆ ಮಾಡಲಾಯಿತು ಎಂದು ಅನುರಾಗ್ ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆ ಪತ್ರದಲ್ಲಿ ತಿಳಿಸಿದ್ದಾರೆ.
"ನಾನು ಕೋಟಾದಿಂದ ಹಿಂದಿರುಗಿದೆ ಮತ್ತು 2024ರ ಮೇ 4ರ ರಾತ್ರಿ ನನ್ನ ಚಿಕ್ಕಪ್ಪ, ಅಮಿತ್ ಆನಂದ್ ಮತ್ತು ನಿತೀಶ್ ಕುಮಾರ್ ಅವರ ಬಳಿಗೆ ಕರೆದೊಯ್ದರು. ಅಲ್ಲಿ ನನಗೆ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ನೀಡಲಾಯಿತು ಮತ್ತು ಅದನ್ನು ರಾತ್ರಿಯಿಡೀ ಓದಲು ಮತ್ತು ಉತ್ತರಗಳನ್ನು ನೆನಪಿಟ್ಟುಕೊಳ್ಳುವಂತೆ ಸೂಚಿದರು. ಡಿವೈ ಪಾಟೀಲ್ ಶಾಲೆ ನನ್ನ ಪರೀಕ್ಷಾ ಕೇಂದ್ರವಾಗಿತ್ತು’’ ಎಂದು ಯಾದವ್ ಹೇಳಿದ್ದಾರೆ.
NEET ಆಕಾಂಕ್ಷಿಯು ಪರೀಕ್ಷೆಯ ದಿನದಂದು ನಿಜವಾದ ಪ್ರಶ್ನೆ ಪತ್ರಿಕೆಯನ್ನು ನೋಡಿದಾಗ, ತನ್ನ ಚಿಕ್ಕಪ್ಪ ತನಗೆ ನೀಡಿದ ಪ್ರಶ್ನೆ ಪತ್ರಿಕೆಯೊಂದಿಗೆ ಹೊಲಿಕೆಯಾಯಿತು.
"ನನ್ನ ಪರೀಕ್ಷಾ ಕೇಂದ್ರದಲ್ಲಿ ನಾನು ಸ್ವೀಕರಿಸಿದ ಪ್ರಶ್ನೆ ಪತ್ರಿಕೆ ಮತ್ತು ಮೇ 4 ರ ರಾತ್ರಿ ನನಗೆ ನೀಡಿದ ಪ್ರಶ್ನೆ ಪತ್ರಿಕೆ ಎರಡೂ ಒಂದೆಯಾಗಿತ್ತು. ನಾನು ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ" ಎಂದು ಅನುರಾಗ್ ಯಾದವ್ ತಿಳಿಸಿದ್ದಾರೆ.