ಬಹುಜನ ಸಮಾಜವಾದಿ ಪಕ್ಷ(BSP) ವರಿಷ್ಠೆ ಮಾಯಾವತಿ ಮತ್ತೊಮ್ಮೆ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಉತ್ತರಾಧಿಕಾರಿ ಎಂದು ಘೋಷಿಸಿದ್ದು ಪಕ್ಷದ ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಡಲಾಗಿದೆ.
ಆಕಾಶ್ ಆನಂದ್ ಶೀಘ್ರದಲ್ಲೇ ರಾಷ್ಟ್ರೀಯ ಕಾರ್ಯಕಾರಿಣಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ಬಹುಜನ ಸಮಾಜ ಪಕ್ಷದ ಬೃಹತ್ ಸಮಾವೇಶ ನಡೆಸಲಾಯಿತು. ಈ ಸಭೆಯಲ್ಲಿ ಬಿಎಸ್ಪಿ ವರಿಷ್ಠೆ ಮಾಯಾವತಿ, ಅವರ ಸೋದರಳಿಯ ಆಕಾಶ್ ಆನಂದ್ ಮತ್ತು ಅವರ ಸಹೋದರ ಆನಂದ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಆಕಾಶ್ ಆನಂದ್ ಅವರನ್ನು ಮತ್ತೊಮ್ಮೆ ಪಕ್ಷದ ರಾಷ್ಟ್ರೀಯ ಸಂಯೋಜಕರನ್ನಾಗಿ ಮಾಡಲಾಯಿತು.
ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಎಸ್ಪಿ ಪಾಲ್ಗೊಳ್ಳಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಸಭೆಗೆ ಆಗಮಿಸಿದ ಕೂಡಲೇ ಆಕಾಶ್ ಆನಂದ್ ಅವರು ಬಿಎಸ್ಪಿ ವರಿಷ್ಠೆ ಮತ್ತು ಅವರ ಚಿಕ್ಕಮ್ಮ ಮಾಯಾವತಿಯವರ ಪಾದ ಮುಟ್ಟಿ ಆಶೀರ್ವಾದ ಪಡೆದರು.