ಪುಣೆ: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದ ಅಪ್ರಾಪ್ತ ಆರೋಪಿಯನ್ನು ಬಿಡುಗಡೆ ಮಾಡುವಂತೆ ಮುಂಬೈ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ. ನ್ಯಾಯಾಲಯವು ರಿಮಾಂಡ್ ಆದೇಶವನ್ನು ಕಾನೂನುಬಾಹಿರವೆಂದು ಘೋಷಿಸಿ ಅದನ್ನು ರದ್ದುಗೊಳಿಸಿತು.
ಪ್ರಸ್ತುತ ಅಬ್ಸರ್ವೇಶನ್ ಹೋಮ್‌ನಲ್ಲಿರುವ ಅಪ್ರಾಪ್ತ ಬಾಲಕನನ್ನು ಬಿಡುಗಡೆ ಮಾಡುವಂತೆ ಆತನ ತಂದೆಯ ಚಿಕ್ಕಮ್ಮ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರ ವಿಭಾಗೀಯ ಪೀಠವು ಅಂಗೀಕರಿಸಿತು. ಅಪ್ರಾಪ್ತ ಬಾಲಕನನ್ನು ಬಿಡುಗಡೆ ಮಾಡುವಂತೆ ಬಾಲ ನ್ಯಾಯ ಮಂಡಳಿಗೆ ನ್ಯಾಯಾಲಯ ಆದೇಶಿಸಿದೆ.
ಪುಣೆ ಪೋರ್ಷೆ ಅಪಘಾತ ಪ್ರಕರಣದ ಅಪ್ರಾಪ್ತ ಆರೋಪಿಯನ್ನು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಆತನನ್ನು ವೀಕ್ಷಣಾ ಕೇಂದ್ರಕ್ಕೆ ಜುವೆನೈಲ್ ಜಸ್ಟಿಸ್ ಬೋರ್ಡ್ ರಿಮಾಂಡ್ ಮಾಡಿದ್ದು ಹೇಗೆ ಎಂದು ಕಳೆದ ವಾರ ವಿಚಾರಣೆಯ ವೇಳೆ ನ್ಯಾಯಾಲಯ ಪ್ರಶ್ನಿಸಿತ್ತು.
ಕಳೆದ ಮೇ 19ರಂದು, ಪುಣೆಯ ಪ್ರಮುಖ ಉದ್ಯಮಿ ಬಿಲ್ಡರ್ ವೊಬ್ಬರ 17 ವರ್ಷದ ಪುತ್ರ ಮದ್ಯ ಸೇವಿಸಿ ಅಮಲಿನಲ್ಲಿ ಪೋರ್ಚೆ ಟೇಕಾನ್ ಕಾರನ್ನು ಚಾಲನೆ ಮಾಡುತ್ತಿದ್ದ ವೇಳೆ ಕಲ್ಯಾಣಿ ನಗರ ಪ್ರದೇಶದಲ್ಲಿ ನಿಯಂತ್ರಣ ಕಳೆದುಕೊಂಡು ಬೈಕ್ ಗೆ ಡಿಕ್ಕಿ ಹೊಡೆದಿದ್ದನು. ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದರು.