ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ಹೊರಬರದಂತೆ ನೋಡಿಕೊಳ್ಳಲು ಇಡೀ ವ್ಯವಸ್ಥೆಯು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ದೆಹಲಿ ಸಿಎಂ ಪತ್ನಿ ಸುನಿತಾ ಕೇಜ್ರಿವಾಲ್ ಅವರು, ಇದು "ಸರ್ವಾಧಿಕಾರ" ಮತ್ತು "ತುರ್ತು ಪರಿಸ್ಥಿತಿ"ಗೆ ಸಮಾನ ಎಂದು ಬುಧವಾರ ಹೇಳಿದ್ದಾರೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಸಿಗುವ ಸಾಧ್ಯತೆ ಇರುವುದರಿಂದ ಗಾಬರಿಗೊಂಡ ಬಿಜೆಪಿ ಈಗ ಸಿಬಿಐನಿಂದ "ನಕಲಿ ಪ್ರಕರಣ" ದಲ್ಲಿ ಅವರನ್ನು ಬಂಧಿಸಿದೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಹೇಳಿದೆ.
ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಬುಧವಾರ ಔಪಚಾರಿಕವಾಗಿ ಬಂಧಿಸಿದೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಎಎಪಿ ರಾಷ್ಟ್ರೀಯ ಸಂಚಾಲಕರನ್ನು ಐದು ದಿನಗಳ ಕಸ್ಟಡಿಗೆ ಕೋರಿದೆ.
ಅಬಕಾರಿ ನೀತಿ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೂನ್ 20 ರಂದು ತಮ್ಮ ಪತಿಗೆ ಜಾಮೀನು ಸಿಕ್ಕಿತ್ತು. ಆದರೆ ಜಾರಿ ನಿರ್ದೇಶನಾಲಯ(ಇಡಿ) ತಕ್ಷಣವೇ ಅದಕ್ಕೆ ತಡೆಯಾಜ್ಞೆ ತಂದಿದೆ. ಮರುದಿನವೇ ಸಿಬಿಐ ಅವರನ್ನು ಆರೋಪಿಯನ್ನಾಗಿ ಮಾಡಿದೆ ಮತ್ತು ಇಂದು ಅವರನ್ನು ಬಂಧಿಸಿದೆ. ಇಡೀ ವ್ಯವಸ್ಥೆಯು ದೆಹಲಿ ಸಿಎಂ ಜೈಲಿನಿಂದ ಹೊರಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಕಾನೂನಲ್ಲ. ಇದು ಸರ್ವಾಧಿಕಾರ, ಇದು ತುರ್ತುಸ್ಥಿತಿ" ಎಂದು ಹಿಂದಿಯಲ್ಲಿ ಎಕ್ಸ್ ನಲ್ಲಿ ಸುನಿತಾ ಕೇಜ್ರಿವಾಲ್ ಪೋಸ್ಟ್ ಮಾಡಿದ್ದಾರೆ.
ಎಎಪಿ ಸಹ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿದೆ. "ಸರ್ವಾಧಿಕಾರಿ ಕ್ರೌರ್ಯದ ಎಲ್ಲಾ ಮಿತಿಗಳನ್ನು ದಾಟಿದೆ!! ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಸಿಗುವ ಎಲ್ಲಾ ಸಾಧ್ಯತೆಗಳು ಇದ್ದಾಗ, ಬಿಜೆಪಿ ಪ್ಯಾನಿಕ್ ಮೋಡ್‌ಗೆ ಹೋಗಿ ಕೇಜ್ರಿವಾಲ್ ಅವರನ್ನು ನಕಲಿ ಪ್ರಕರಣದಲ್ಲಿ ಸಿಬಿಐ ಮೂಲಕ ಬಂಧಿಸಿದೆ" ಎಂದು ಆರೋಪಿಸಿದೆ.