ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ(ನೀಟ್) ಅಕ್ರಮಗಳ ನಡುವೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಖಾಸಗಿ ಕಂಪನಿಗಳ ಮೂಲಕ ಎಲ್ಲಾ ಪರೀಕ್ಷೆಗಳನ್ನು ನಡೆಸುತ್ತದೆ ಎಂದು ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಭಾನುವಾರ ಆರೋಪಿಸಿದ್ದಾರೆ.
ನೀಟ್ ಅಕ್ರಮಕ್ಕೆ ಸಂಬಂಧಿಸಿದ ತಮ್ಮ ಬೇಡಿಕೆಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸುವುದಾಗಿ ತಿಳಿಸಿದ ಜೈರಾಮ್ ರಮೇಶ್, ಈ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಮಸ್ಯೆ ಕೇವಲ ನೀಟ್‌ಗೆ ಸಂಬಂಧಿಸಿದ್ದಲ್ಲ. ಆದರೆ ಶಿಕ್ಷಣ ಸಚಿವಾಲಯ ನಡೆಸುವ ಎಲ್ಲಾ ಸಂಸ್ಥೆಗಳಿಗೆ ಸಂಬಂಧಿಸಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ಎನ್‌ಟಿಎ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಏನು ಮಾಡುತ್ತದೆ ಎಂಬುದರ ಕುರಿತು ನಾವು ಸದನದ ಮುಂದಿಡುತ್ತೇವೆ. ಇದು ಖಾಸಗಿ ಕಂಪನಿಗಳ ಮೂಲಕ ಎಲ್ಲಾ ಪರೀಕ್ಷೆಗಳನ್ನು ನಡೆಸುತ್ತದೆ ಎಂದರು.
ನೀಟ್ ಹಗರಣ ಎಲ್ಲಿ ನಡೆದಿವೆ? ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಬಿಹಾರ, ಗುಜರಾತ್ ಮತ್ತು ಮಧ್ಯಪ್ರದೇಶ ಈ ಹಗರಣಗಳು ನಡೆದಿವೆ. ಮೊದಲು ಅವರು ಇದು ಒಂದು ಚಿಕ್ಕ ವಿಷಯ ಎಂದರು. ನಂತರ ಅವರು ಸಿಬಿಐ ತನಿಖೆಯ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದರು.