ದೇಶ

ಚುನಾವಣಾ ಬಾಂಡ್‌: ಭಾರತದ ಅತಿದೊಡ್ಡ ಹಗರಣ ಎಂದ ಶಿವಸೇನೆ; ಎಸ್‌ಐಟಿ ತನಿಖೆಗೆ ಕಾಂಗ್ರೆಸ್ ಆಗ್ರಹ

Srinivasamurthy VN

ನವದೆಹಲಿ: ಚುನಾವಣಾ ಬಾಂಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಈ ಪ್ರಕರಣವನ್ನು ಶಿವಸೇನೆ ಭಾರತದ ಅತಿದೊಡ್ಡ ಹಗರಣ ಎಂದು ಬಣ್ಣಿಸಿದೆ.

ಗೇಮಿಂಗ್ ಮತ್ತು ಜೂಜಿನ ಕಂಪನಿಗಳು ಖರೀದಿಸಿದ ಚುನಾವಣಾ ಬಾಂಡ್‌ಗಳ ಪ್ರಮುಖ ಫಲಾನುಭವಿ ಬಿಜೆಪಿ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಆರೋಪಿಸಿದ್ದು, ಭಾರತೀಯ ಜನತಾ ಪಕ್ಷವು "ದೇಶದ ಅತಿದೊಡ್ಡ ಹಗರಣ" ದಲ್ಲಿ ಭಾಗಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣಾ ಬಾಂಡ್ ಯೋಜನೆ ಮೂಲಕ 'ಗೇಮಿಂಗ್ ಮತ್ತು ಜೂಜಿನ ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸುವುದನ್ನು ಒಳಗೊಂಡಿರುತ್ತದೆ ಮತ್ತು ಹಣವನ್ನು ನೇರವಾಗಿ ಬಿಜೆಪಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ. ಈ ಮೂಲಕ ಮೇಘಾ ಇಂಜಿನಿಯರಿಂಗ್ ಹಲವಾರು ಗುತ್ತಿಗೆಗಳನ್ನು ಪಡೆದುಕೊಂಡಿದ್ದು, ಬಿಜೆಪಿ ಪರವಾಗಿ ಲಕ್ಷಗಟ್ಟಲೆ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿ, ಹಣವನ್ನು ಬಿಜೆಪಿಯ ಬ್ಯಾಂಕ್ ಖಾತೆಗೆ ಹರಿಸಿದೆ. ಚುನಾವಣಾ ಬಾಂಡ್‌ಗಳಲ್ಲಿ ಹಣವನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ವರ್ಗಾಯಿಸಿದ ಕಂಪನಿಗಳು, ಇದು ದೇಶದ ಅತಿದೊಡ್ಡ ಹಗರಣವಾಗಿದೆ ಎಂದು ರಾವತ್ ಹೇಳಿದರು.

ಎಸ್‌ಐಟಿ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್

ಇದೇ ವೇಳೆ ಚುನಾವಣಾ ಬಾಂಡ್ ಕುರಿತು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷ ಕೂಡ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಿಬೇಕು ಎಂದು ಆಗ್ರಹಿಸಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಅವರು, 'ಚುನಾವಣಾ ಬಾಂಡ್‌ಗಳ ವಿಚಾರವನ್ನು ಯಾವುದೇ ತನಿಖಾ ಸಂಸ್ಥೆಗಳು ತನಿಖೆ ನಡೆಸುವುದಿಲ್ಲ. ಇ.ಡಿ (ಜಾರಿ ನಿರ್ದೇಶನಾಲಯ) ಮತ್ತು ಸಿಬಿಐ ಇದೀಗ ನಿದ್ದೆ ಮಾಡುತ್ತಿವೆ. ಪ್ರತಿಪಕ್ಷಗಳು ಈ ಪ್ರಕರಣದಲ್ಲಿ ಭಾಗಿಯಾಗಿದಿದ್ದರೆ ಆಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದರು. ಅವು ನಿದ್ರೆ ಮಾತ್ರೆಗಳನ್ನು ಓವರ್‌ಡೋಸ್ ತೆಗೆದುಕೊಂಡು ಗಾಢ ನಿದ್ರೆಗೆ ಜಾರಿವೆ ಎಂದು ಕಿಡಿಕಾರಿದ್ದಾರೆ.

ಅಂತೆಯೇ ನಾ ಖಾವೂಂಗಾ, ನಾ ಖಾನೆದೂಂಗಾ ಎಂದು ಹೇಳಿದ್ದ ಪ್ರಧಾನಿ ಮೋದಿ ಸ್ವಿಸ್ ಬ್ಯಾಂಕ್ ನಿಂದ ಕಪ್ಪುಹಣವನ್ನು ತಂದು ಪ್ರತೀಯೊಬ್ಬರ ಖಾತೆಗೆ ತಲಾ 15 ಲಕ್ಷ ರೂ ಜಮಾ ಮಾಡುವುದಾಗಿ ಹೇಳಿದ್ದರು. ಆದರೆ ಇದೀಗ ಆ ಕಪ್ಪು ಹಣವನ್ನುತಮ್ಮ ಖಾತೆಗೆ ಹಾಕಿಕೊಂಡಿರುವಂತಿದೆ. ನನ್ನ ಅಭಿಪ್ರಾಯದಲ್ಲಿ, ಇದನ್ನು ಯಾವುದೇ ತನಿಖಾ ಸಂಸ್ಥೆಗಳು ತನಿಖೆ ನಡೆಸುವುದಿಲ್ಲ. ಈಗ ಅವರು ಏನು ಮಾಡುತ್ತಾರೆ ಮತ್ತು ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ನ್ಯಾಯಾಲಯದ ಮೇಲಿದೆ ಎಂದು ಹೇಳಿದರು.

ಮೋದಿ ಸರ್ಕಾರದಲ್ಲಿ 2 ದೊಡ್ಡ ಹಗರಣ

ಮತ್ತೋರ್ವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಮಾತನಾಡಿ, ದೇಶದಲ್ಲಿ ನಡೆದಿರುವ ಎರಡು ಪ್ರಮುಖ ಹಗರಣಗಳೆಂದರೆ ನೋಟು ಅಮಾನ್ಯೀಕರಣ ಮತ್ತು ಇನ್ನೊಂದು ಹಗರಣ ಚುನಾವಣಾ ಬಾಂಡ್‌ಗಳು ಎಂದು ಹೇಳಿದರು. '2ಜಿ ಪ್ರಕರಣದಲ್ಲಿ ಎಸ್‌ಐಟಿ ರಚಿಸಿದಂತೆಯೇ ಈ ಪ್ರಕರಣದಲ್ಲೂ ಎಸ್‌ಐಟಿ ರಚನೆಯಾಗಬೇಕು, ಈಗ ಕಾನೂನು ಹೇಗೆ ನೋಡುತ್ತದೆ ಎಂಬುದನ್ನು ನೋಡಬೇಕು.. ಪಿಎಂ-ಕೇರ್ಸ್‌ಗೆ ಯಾರು ದೇಣಿಗೆ ನೀಡಿದ್ದಾರೆ. ಯಾವ ಪಕ್ಷಕ್ಕೆ ಎಷ್ಟು ಹಣ ಸಿಕ್ಕಿದೆ ಎಂಬುದು ತನಿಖೆಯ ವಿಷಯವಾಗಿದೆ' ಎಂದು ಅವರು ಹೇಳಿದರು.

ಮೋದಿ ಸರ್ಕಾರದ ನಾಟಕ

ಆರ್‌ಜೆಡಿ ಸಂಸದ ಮನೋಜ್ ಝಾ ಅವರು ಕಂಪನಿಗಳ ಮೇಲಿನ ಇತ್ತೀಚಿನ ಇಡಿ ದಾಳಿಗಳು ಮತ್ತು ಬಾಂಡ್‌ಗಳ ನಂತರದ ಖರೀದಿಯ ನಡುವಿನ ಸಂಬಂಧವನ್ನು ತಳುಕು ಹಾಕಿದ್ದಾರೆ. ಮೋದಿ ಸರ್ಕಾರದ ನಾಟಕ ಇನ್ನು ಮುಂದೆ ನೆಯುವುದಿಲ್ಲ. ದೇಶದ ಜನರು ಇಂದು ಗಂಭೀರವಾಗಿ ನೋಡುತ್ತಿದ್ದಾರೆ, ಎಲ್ಲರಿಗೂ ಅದರ ಬಗ್ಗೆ ಈಗಾಗಲೇ ತಿಳಿದಿದೆ. ಇಡಿ ದಾಳಿ ನಡೆಸುತ್ತದೆ ಮತ್ತು ಕೆಲವೇ ಗಂಟೆಗಳ ನಂತರ, ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗುತ್ತದೆ. ಒಬ್ಬರು ಈ ಪರಸ್ಪರ ಸಂಬಂಧವನ್ನು ನೋಡಬೇಕು" ಎಂದು ಮನೋಜ್ ಝಾ ಹೇಳಿದರು.

SCROLL FOR NEXT