ದೇಶ

ಮಮತಾ ಬ್ಯಾನರ್ಜಿ ಆರೋಗ್ಯ ಸ್ಥಿರ: ಆಸ್ಪತ್ರೆಯಿಂದ ಬಿಡುಗಡೆ

Manjula VN

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಗುರುವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮಮತಾ ಬ್ಯಾನರ್ಜಿ ಆರೋಗ್ಯ ಸಂಬಂಧ ಹೇಳಿಕೆ ನೀಡಿರುವ ಹಿರಿಯ ಅಧಿಕಾರಿಗಳು, ಮಮತಾ ಅವರ ಹಣೆ ಹಾಗೂ ಮೂಗಿಗೆ ಗಾಯಗಳಾಗಿದ್ದವು. ಇದೀಗ ಅವರ ಆರೋಗ್ಯ ಸ್ಥಿರವಾಗಿದೆ. ಹಿರಿಯ ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದರು. ರಾತ್ರಿ ಉತ್ತಮವಾಗಿ ನಿದ್ರಿಸಿದ್ದಾರೆಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಹಣೆಗೆ ಮೂರು ಹಾಗೂ ಮೂಗಿನ ಮೇಲೆ ಒಂದು ಹೊಲಿಗೆ ಹಾಕಲಾಗಿದೆ. ಅಗತ್ಯ ವೈದ್ಯಕೀಯ ಪರೀಕ್ಷೆಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಮತಾ ಅವರ ಹಣೆ ಮತ್ತು ಮೂಗಿನ ಮೇಲೆ ತೀಕ್ಷ್ಣವಾದ ಗಾಯಗಳಾಗಿದ್ದವು, ಅದರಿಂದ ತೀವ್ರವಾಗಿ ರಕ್ತಸ್ರಾವವಾಗಿತ್ತು. ಆರಂಭದಲ್ಲಿ, ನಮ್ಮ ಸಂಸ್ಥೆಯ ನರಶಸ್ತ್ರಚಿಕಿತ್ಸೆ, ಔಷಧ ಮತ್ತು ಹೃದ್ರೋಗ ವಿಭಾಗದ ಹಿರಿಯ ವೈದ್ಯರು ಅವರನ್ನು ಪರೀಕ್ಷೆಗೆ ಒಳಪಡಿಸಿದರು. ಬಳಿಕ, ಹಣೆಗೆ ಮೂರು ಹೊಲಿಗೆಗಳನ್ನು ಹಾಕಲಾಯಿತು. ಅಗತ್ಯವಿದ್ದ ಡ್ರೆಸ್ಸಿಂಗ್ ಮಾಡಲಾಯಿತು. ಇಸಿಜಿ, ಎಕೋಕಾರ್ಡಿಯೋಗ್ರಾಮ್, ಸಿಟಿ ಸ್ಕ್ಯಾನ್ ಮತ್ತು ಡಾಪ್ಲರ್‌ನಂತಹ ಪರೀಕ್ಷೆಗಳನ್ನು ನಡೆಸಲಾಯಿತು. ನಿಗಾದಲ್ಲಿ ಇರಬೇಕಾಗಿರುವುದರಿಂದ ಆಸ್ಪತ್ರೆಯಲ್ಲಿ ಇರುವಂತೆ ಸೂಚಿಸಲಾಯಿತಾದರೂ ಮಮತಾ ಮನೆಗೆ ತೆರಳಿದ್ದಾರೆ ಎಂದು ಎಸ್‌ಎಸ್‌ಕೆಎಂ ಆಸ್ಪತ್ರೆಯ ನಿರ್ದೇಶಕ ಮಣಿಮೋಯ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.ಮ

ಈ ನಡುವೆ ಘಟನೆಯ ಹಿಂದಿನ ಕಾರಣವನ್ನು ಕೋಲ್ಕತ್ತಾ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ತನಿಖೆ ಕೈಗೆತ್ತಿಕೊಂಡಿರುವ ಅಧಿಕಾರಿಗಳು ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಒಳ ಮತ್ತು ಹೊರ ಆವರಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಿದ್ದು, ಮುಖ್ಯಮಂತ್ರಿ ನಿವಾಸದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಯನ್ನೂ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT