ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ  
ದೇಶ

'ವಿಕಸಿತ ಭಾರತದ ಕನಸು ಸಾಕಾರಕ್ಕೆ ನಿಮ್ಮ ಸಹಕಾರ, ಬೆಂಬಲ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ': ಪ್ರಧಾನಿ ಮೋದಿ ಪತ್ರ

Sumana Upadhyaya

ನವದೆಹಲಿ: ಲೋಕಸಭೆ ಚುನಾವಣೆ 2024ಕ್ಕೆ (Lok Sabha Election 2024) ಇಂದು ಶನಿವಾರ ಚುನಾವಣಾ ಆಯೋಗ ದಿನಾಂಕ ಘೋಷಿಸಲಿದೆ. ಚುನಾವಣೆ ದಿನಾಂಕ ಘೋಷಣೆಗೆ ಮೊದಲೇ ಎಲ್ಲ ರಾಜಕೀಯ ಪಕ್ಷಗಳು ಪ್ರಚಾರ, ರಣತಂತ್ರ, ಟಿಕೆಟ್‌ ಘೋಷಣೆ ಹೀಗೆ ತಮ್ಮ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿವೆ. ಚುನಾವಣೆಗೆ ದಿನಾಂಕ ಘೋಷಣೆಯಾಗುವ ಒಂದು ದಿನ ಮೊದಲು ಪ್ರಧಾನ ಮಂತ್ರಿ ದೇಶವಾಸಿಗಳನ್ನುದ್ದೇಶಿಸಿ ಪತ್ರ ಬರೆದಿದ್ದಾರೆ.

ಕಳೆದ 10 ವರ್ಷಗಳಲ್ಲಿ ದೇಶದ ಅಭಿವೃದ್ಧಿ, ಕೇಂದ್ರ ಸರ್ಕಾರದ ಯೋಜನೆಗಳು, ಜನರಿಗೆ ಕೃತಜ್ಞತೆ, ವಿಕಸಿತ ಭಾರತದ ಕಲ್ಪನೆ ಸೇರಿ ಹತ್ತಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. “ಪ್ರಿಯ ದೇಶವಾಸಿಗಳೇ, 140 ಕೋಟಿ ಜನರ ಆಶೀರ್ವಾದ, ಬೆಂಬಲ ಹಾಗೂ ಸ್ಫೂರ್ತಿಯಿಂದಾಗಿಯೇ 10 ವರ್ಷಗಳಿಂದ ಉತ್ತಮ ಆಡಳಿತ ನೀಡಲು ಸಾಧ್ಯವಾಗಿದೆ. ಬಡವರು, ರೈತರು, ಯುವಕರು ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಒಂದು ದಶಕದಲ್ಲಿ ನಮ್ಮ ಸರ್ಕಾರವು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆಲ್ಲ ನಿಮ್ಮ ಆಶೀರ್ವಾದವೇ ಕಾರಣ” ಎಂದು ಪತ್ರವನ್ನು ಆರಂಭಿಸಿದ್ದಾರೆ.

“ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಬಡವರಿಗೆ ಸುಸಜ್ಜಿತ ಮನೆಗಳ ನಿರ್ಮಾಣದ ಯಶಸ್ಸು, ವಿದ್ಯುತ್‌ ಸಂಪರ್ಕ, ಪ್ರತಿಯೊಬ್ಬರ ಮನೆಗಳಿಗೂ ನೀರು ಹಾಗೂ ಅಡುಗೆ ಅನಿಲ ಸಿಲಿಂಡರ್‌ ಪೂರೈಕೆ, ಆಯುಷ್ಮಾನ್‌ ಭಾರತ್‌ ಯೋಜನೆ ಅನ್ವಯ ಉಚಿತ ಚಿಕಿತ್ಸೆ, ರೈತರಿಗೆ ಹಣಕಾಸು ನೆರವು, ಮಾತೃ ವಂದನಾ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ನೆರವು ಸೇರಿ ಹತ್ತಾರು ಯೋಜನೆಗಳ ಯಶಸ್ಸಿಗೆ ನೀವು ನೀಡಿದ ಬೆಂಬಲ, ನನ್ನ ಮೇಲೆ ಇಟ್ಟ ನಂಬಿಕೆಯೇ ಇಂಧನವಾಗಿದೆ ಎಂದು ಹೇಳಿದ್ದಾರೆ.

370ನೇ ವಿಧಿ ರದ್ದು, ಜಿಎಸ್‌ಟಿ: ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಪ್ರಮುಖ ತೀರ್ಮಾನಗಳ ಕುರಿತು ಕೂಡ ಪ್ರಧಾನಿ ಪ್ರಸ್ತಾಪಿಸಿದ್ದಾರೆ. ದೇಶದ ಜನ ನಮ್ಮ ಮೇಲೆ ಇಟ್ಟ ನಂಬಿಕೆಯಿಂದಲೇ ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಜಿಎಸ್‌ಟಿ ಜಾರಿ, 370ನೇ ವಿಧಿ ರದ್ದು, ತ್ರಿವಳಿ ತಲಾಕ್‌ ನಿಷೇಧ, ನಾರಿ ಶಕ್ತಿ ವಂದನಾ ಕಾಯ್ದೆ, ನೂತನ ಸಂಸತ್‌ ಭವನದ ಉದ್ಘಾಟನೆ, ಉಗ್ರವಾದ ಹಾಗೂ ಎಡಪಂಥೀಯ ತೀವ್ರವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು” ಎಂದು ಪ್ರಧಾನಿ ಹೇಳಿದ್ದಾರೆ.

ವಿಕಸಿತ ಭಾರತದ ಕನಸು: “ಜನರ ಸಹಭಾಗಿತ್ವ ಇದ್ದಾಗಲೇ ಪ್ರಜಾಪ್ರಭುತ್ವದ ಮೆರುಗು ಇನ್ನಷ್ಟು ಹೆಚ್ಚಾಗುತ್ತದೆ. ದೇಶದ ಜನ ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ, ಭರವಸೆ ಇಟ್ಟ ಕಾರಣದಿಂದಾಗಿಯೇ ನಾನು ದೇಶದ ಪ್ರಗತಿಗಾಗಿ ಹಲವು ನಿರ್ಧಾರ ತೆಗೆದುಕೊಳ್ಳಲು ಕಾರಣವಾಯಿತು. ಜನರಿಗಾಗಿ ಯೋಜನೆಗಳ ಜಾರಿ, ಅವುಗಳ ಸಮರ್ಪಕ ಅನುಷ್ಠಾನಕ್ಕೆ ಶಕ್ತಿ ನೀಡಿತು. ಮುಂದಿನ ದಿನಗಳಲ್ಲೂ ವಿಕಸಿತ ಭಾರತದ ಕನಸಿನ ಸಾಕಾರಕ್ಕಾಗಿ ನಿಮ್ಮ ಸಲಹೆ-ಸೂಚನೆಗಳ ಅಗತ್ಯವಿದೆ. ದೇಶದ ಏಳಿಗೆಯು ಉಚ್ಛ್ರಾಯ ಸ್ಥಿತಿ ತಲುಪಲು ನಿಮ್ಮ ಬೆಂಬಲ, ಸಹಕಾರ ಇದ್ದೇ ಇರುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಮೋದಿ ಪತ್ರದ ಮೂಲಕ ತಿಳಿಸಿದ್ದಾರೆ.

SCROLL FOR NEXT