ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ದೇಶ

ಮಹಾರಾಷ್ಟ್ರ: ವಿಧ್ವಂಸಕ ಕೃತ್ಯಕ್ಕೆ ಸಂಚು; ಗಡ್ಚಿರೋಲಿ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರ ಹತ್ಯೆ

Ramyashree GN

ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಮಂಗಳವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರು ಹತರಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಾಲ್ವರು ನಕ್ಸಲರ ಪತ್ತೆಗೆ ಒಟ್ಟಾರೆ 36 ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಲಾಗಿತ್ತು.

ಮುಂಬರುವ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯ ನಡುವೆ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಕೆಲವು ನಕ್ಸಲರು ನೆರೆಯ ತೆಲಂಗಾಣದಿಂದ ಪ್ರಾಣಹಿತ ನದಿ ದಾಟಿ ಗಡ್ಚಿರೋಲಿಗೆ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಸೋಮವಾರ ಮಧ್ಯಾಹ್ನ ಪೊಲೀಸರಿಗೆ ಲಭಿಸಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.

ಗಡ್ಚಿರೋಲಿ ಪೊಲೀಸ್‌ನ ವಿಶೇಷ ನಿಗ್ರಹ ಘಟಕವಾದ ಸಿ-60ರ ಹಲವು ತಂಡಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕ್ಷಿಪ್ರ ಕಾರ್ಯಪಡೆ ತಂಡವನ್ನು ಈ ಪ್ರದೇಶದಲ್ಲಿ ಶೋಧಕ್ಕಾಗಿ ಕಳುಹಿಸಲಾಗಿದೆ.

ಸಿ-60 ಘಟಕದ ತಂಡವೊಂದು ಮಂಗಳವಾರ ಬೆಳಗ್ಗೆ ರೆಪನ್‌ಪಲ್ಲಿ ಸಮೀಪದ ಕೋಲಮಾರ್ಕ ಬೆಟ್ಟಗಳಲ್ಲಿ ಶೋಧ ನಡೆಸುತ್ತಿದ್ದಾಗ ನಕ್ಸಲರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗುಂಡಿನ ದಾಳಿ ನಿಲ್ಲಿಸಿದ ನಂತರ, ಆ ಪ್ರದೇಶದಲ್ಲಿ ಶೋಧ ನಡೆಸಿದಾಗ ನಾಲ್ವರು ನಕ್ಸಲರ ಮೃತದೇಹಗಳು ಪತ್ತೆಯಾಗಿವೆ. ಅವರೆಲ್ಲರ ಪತ್ತೆಗಾಗಿ ಒಟ್ಟು 36 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿತ್ತು. ಸ್ಥಳದಿಂದ ಎಕೆ-47 ಗನ್, ಕಾರ್ಬೈನ್, ಎರಡು ದೇಸೀ ನಿರ್ಮಿತ ಪಿಸ್ತೂಲ್, ನಕ್ಸಲ್ ಸಾಹಿತ್ಯ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮೃತ ನಕ್ಸಲರನ್ನು ವಿವಿಧ ನಕ್ಸಲ್ ಸಮಿತಿಗಳ ಕಾರ್ಯದರ್ಶಿಗಳಾದ ವರ್ಗೀಶ್, ಮಾಗ್ತು ಮತ್ತು ಪ್ಲಟೂನ್ ಸದಸ್ಯರಾದ ಕುರ್ಸಾಂಗ್ ರಾಜು ಮತ್ತು ಕುಡಿಮೆಟ್ಟ ವೆಂಕಟೇಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT