ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ 
ದೇಶ

ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿ ತಮಿಳುನಾಡಿನವ: ಶೋಭಾ ಕರಂದ್ಲಾಜೆ ವಿರುದ್ಧ ದೂರು ದಾಖಲಿಸಿದ ಡಿಎಂಕೆ

Ramyashree GN

ಚೆನ್ನೈ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ತಮಿಳುನಾಡಿನವನು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಡಿಎಂಕೆ ಬುಧವಾರ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಕೇಂದ್ರ ಸಚಿವೆ ಪ್ರಜಾಪ್ರತಿನಿಧಿ ಕಾಯ್ದೆ, 1951 ಮತ್ತು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ತಮಿಳುನಾಡಿನ ಆಡಳಿತ ಪಕ್ಷವು ಶೋಭಾ ಕರಂದ್ಲಾಜೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು.

ಶೋಭಾ ಕರಂದ್ಲಾಜೆ ಅವರ ಬೆಂಗಳೂರು ಸ್ಫೋಟದಲ್ಲಿ ತಮಿಳುನಾಡಿನ ವ್ಯಕ್ತಿಗಳ ಕೈವಾಡವಿದೆ ಎಂಬ ಹೇಳಿಕೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಟೀಕೆಗೆ ಕಾರಣವಾಯಿತು.

ಬಳಿಕ ಟ್ವೀಟ್ ಮಾಡಿದ ಶೋಭಾ, ನನ್ನ ಮಾತುಗಳಲ್ಲಿ ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಉದ್ದೇಶವಿತ್ತೇ ಹೊರತು ಆರೋಪ ಹೊರಿಸುವ ಆಶಯ ಇರಲಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೂ, ನನ್ನ ಹೇಳಿಕೆಗಳು ಕೆಲವರಿಗೆ ನೋವು ತಂದಿರುವುದನ್ನು ಗಮನಿಸಿದ್ದೇನೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಟೀಕೆಗಳು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರ ಬಗ್ಗೆ ಹೇಳಿದ್ದಾಗಿತ್ತು. ತಮಿಳುನಾಡಿನ ಎಲ್ಲರಿಗೂ ನನ್ನ ಹೃದಯದಿಂದ ಕ್ಷಮೆ ಕೇಳುತ್ತೇನೆ. ಇದಲ್ಲದೆ, ನಾನು ನನ್ನ ಹಿಂದಿನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ.

ಈ ಹೇಳಿಕೆಯು ಕರ್ನಾಟಕ ಮತ್ತು ತಮಿಳುನಾಡಿನ ಜನರ ನಡುವೆ ದ್ವೇಷದ ಭಾವನೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದೆ ಎಂದು ಡಿಎಂಕೆ ಆರೋಪಿಸಿದೆ.

ಡಿಎಂಕೆ ತನ್ನ ದೂರಿನಲ್ಲಿ, 'ಸದ್ಯ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯು ಸ್ಫೋಟದ ಹಿಂದಿನ ಅಪರಾಧಿಯನ್ನು ಗುರುತಿಸಲು ಇದುವರೆಗೆ ಸಾಧ್ಯವಾಗಿಲ್ಲ. ಅದರ ಹೊರತಾಗಿಯೂ, ಮಾನ್ಯ ಸಚಿವರು ಬಾಂಬ್ ಹಾಕಿದವನು ತಮಿಳುನಾಡಿನವನು. ತಮಿಳುನಾಡಿನ ಜನರು ಇಲ್ಲಿಗೆ ಬಂದು ತರಬೇತಿ ಪಡೆದು, ಇಲ್ಲಿ ಬಾಂಬ್‌ಗಳನ್ನು ಹಾಕುತ್ತಾರೆ. ಕೆಫೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಆಧಾರ ರಹಿತ ಆರೋಪ ಮಾಡಿದ್ದಾರೆ' ಎಂದು ದೂರಿದೆ.

'ಈ ಹೇಳಿಕೆಯು ಕರ್ನಾಟಕ ಮತ್ತು ತಮಿಳುನಾಡಿನ ಜನರ ನಡುವೆ ದ್ವೇಷದ ಭಾವನೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ ಮತ್ತು ಚುನಾವಣೆಯ ಉದ್ದೇಶದಿಂದ ಸಚಿವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದು ತಮಿಳುನಾಡಿನ ಜನರನ್ನು ಉಗ್ರಗಾಮಿಗಳಾಗಿ ಸಾಮಾನ್ಯೀಕರಿಸುತ್ತದೆ. ತಮಿಳರು ಮತ್ತು ಕನ್ನಡಿಗರ ನಡುವೆ ಹಗೆತನ ಮತ್ತು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಡಿಎಂಕೆ ಪತ್ರದಲ್ಲಿ ಉಲ್ಲೇಖಿಸಿದೆ.

ಹೇಳಿಕೆಯಲ್ಲಿ ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ತಮಿಳು ಸಮುದಾಯದ ವಿರುದ್ಧ ಹಿಂಸಾಚಾರವನ್ನು ಹುಟ್ಟುಹಾಕುವ ಸಾಮರ್ಥ್ಯ ಹೊಂದಿದೆ. ತಮಿಳಿಗರ ಸದಸ್ಯರ ಬಗ್ಗೆ ಕನ್ನಡಿಗರಲ್ಲಿ ದ್ವೇಷವನ್ನು ಹುಟ್ಟುಹಾಕುವುದು, ಎಂಸಿಸಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಆದ್ದರಿಂದ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ಆರ್‌ಪಿ ಕಾಯ್ದೆಯ ಸೆಕ್ಷನ್ 123(3ಎ) ಮತ್ತು 125 ಮತ್ತು ಎಂಸಿಸಿಯನ್ನು ಉಲ್ಲಂಘಿಸಿದ್ದಕ್ಕಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಾವು ನಿಮ್ಮಲ್ಲಿ ವಿನಂತಿಸುತ್ತೇವೆ ಎಂದು ಡಿಎಂಕೆ ಪತ್ರದಲ್ಲಿ ತಿಳಿಸಿದೆ.

SCROLL FOR NEXT