ಚುನಾವಣಾ ಆಯೋಗದ ಕಚೇರಿ
ಚುನಾವಣಾ ಆಯೋಗದ ಕಚೇರಿ 
ದೇಶ

ವಿಕಸಿತ ಭಾರತ ಸಂದೇಶ ಕಳಿಸುವುದನ್ನು ತಕ್ಷಣವೇ ನಿಲ್ಲಿಸಿ: ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ

Ramyashree GN

ನವದೆಹಲಿ: 'ವಿಕಸಿತ ಭಾರತ ಸಂಪರ್ಕ' ಅಡಿಯಲ್ಲಿ ನಾಗರಿಕರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸುವಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗವು ಗುರುವಾರ ಕೇಂದ್ರಕ್ಕೆ ನಿರ್ದೇಶನ ನೀಡಿದೆ.

ಈ ವಿಷಯದ ಬಗ್ಗೆ ದೂರುಗಳನ್ನು ಸ್ವೀಕರಿಸಿದ ನಂತರ ಆಯೋಗವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಈ ನಿರ್ದೇಶನ ನೀಡಿದೆ.

ನ್ಯಾಯಸಮ್ಮತತೆ ಮತ್ತು ಸಮಾನ ಅವಕಾಶವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿರುವ ವಿಸ್ತೃತ ಕ್ರಮಗಳ ಭಾಗವಾಗಿ ಆಯೋಗವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಆಯೋಗ ಹೇಳಿದೆ.

ಈ ಸಂಬಂಧಿತ ವಿಷಯಗಳ ಅನುಸರಣೆಗೆ ಸಂಬಂಧಿಸಿದಂತೆ ಸಚಿವಾಲಯದಿಂದ ವರದಿಯನ್ನು ಸಹ ಕೋರಿದೆ.

ಲೋಕಸಭೆ ಚುನಾವಣೆ ಅಂಗವಾಗಿ ಮಾರ್ಚ್ 16ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಬರೆದ ಬಹಿರಂಗ ಪತ್ರದೊಂದಿಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಹೊಂದಿದ ಭಾರತ (ವಿಕಸಿತ ಭಾರತ) ನಿರ್ಮಾಣಕ್ಕಾಗಿ ಸಲಹೆಗಳನ್ನು ಸಲ್ಲಿಸಲು ಮನವಿ ಮಾಡಿಕೊಂಡಿರುವ ಸಂದೇಶಗಳನ್ನು ವಾಟ್ಸಾಪ್‌ ಮೂಲಕ ಕಳುಹಿಸಲಾಗಿದೆ ಎಂದು ಸಚಿವಾಲಯವು ಆಯೋಗಕ್ಕೆ ತಿಳಿಸಿತ್ತು.

ವ್ಯವಸ್ಥೆ ಮತ್ತು ನೆಟ್‌ವರ್ಕ್ ಮೂಲಸೌಕರ್ಯದಲ್ಲಿನ ಮಿತಿಗಳಿಂದಾಗಿ ಆ ಸಂದೇಶಗಳು ಕೆಲವರಿಗೆ ವಿಳಂಬವಾಗಿ ತಲುಪಿರಬಹುದು ಎಂದು ಸಚಿವಾಲಯವು ಆಯೋಗಕ್ಕೆ ತಿಳಿಸಿದೆ.

2024ರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಮತ್ತು ಮಾದರಿ ನೀತಿ ಸಂಹಿತೆ ಜಾರಿಗೆ ಬಂದರೂ ಸಹ ಸರ್ಕಾರದ ಯೋಜನೆಗಳನ್ನು ಎತ್ತಿ ತೋರಿಸುವ ಇಂತಹ ಸಂದೇಶಗಳನ್ನು ನಾಗರಿಕರು ವಾಟ್ಸಾಪ್ ಮೂಲಕ ಇನ್ನೂ ಸ್ವೀಕರಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಹಲವಾರು ದೂರುಗಳು ಸಲ್ಲಿಕೆಯಾಗಿವೆ.

ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಸಂದೇಶಕ್ಕೆ ಆಕ್ಷೇಪಣೆಗಳನ್ನು ಎತ್ತಿದ್ದವು. ಸರ್ಕಾರದ ಈ ಕ್ರಮವು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಅಗತ್ಯ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು.

SCROLL FOR NEXT