ಆಪ್ ಪ್ರತಿಭಟನೆ
ಆಪ್ ಪ್ರತಿಭಟನೆ 
ದೇಶ

ದೆಹಲಿ ಸಿಎಂ ಕೇಜ್ರಿವಾಲ್ ಬಂಧನ: ಇದು ಬಿಜೆಪಿ 'ರಾಜಕೀಯ ಕುತಂತ್ರ', ಜೈಲಿನಿಂದಲೇ ಅಧಿಕಾರ ನಡೆಸುತ್ತೇವೆ- AAP

Manjula VN

ನವದೆಹಲಿ: ಮದ್ಯ ಹಗರಣದಲ್ಲಿ ದೆಹಲಿ ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧನಕ್ಕೊಳಪಡಿಸಿರುವುದಕ್ಕೆ ಆಮ್ ಆದ್ಮಿ ಪಕ್ಷ ತೀವ್ರವಾಗಿ ಕಿಡಿಕಾರಿದ್ದು, : ಇದು ಬಿಜೆಪಿ ರಾಜಕೀಯ ಕುತಂತ್ರವಾಗಿದ್ದು, ಜೈಲಿನಿಂದಲೇ ಅಧಿಕಾರ ನಡೆಸುತ್ತೇವೆಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ, ಕೇಜ್ರಿವಾಲ್‌ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ಅವರು ತಮ್ಮ ಖಾತೆಗಳನ್ನು ತ್ಯಜಿಸಲಿದ್ದಾರೆ. ಒಂದು ವೇಳೆ ಅಗತ್ಯಬಿದ್ದರೆ ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆಂದು ಹೇಳಿದರು.

ಅರವಿಂದ್​ ಕೇಜ್ರಿವಾಲ್​ ಈಗಲೂ, ಮುಂದೆಯೂ ದೆಹಲಿ ಮುಖ್ಯಮಂತ್ರಿಯಾಗಿ ಇರುತ್ತಾರೆ. ಅಗತ್ಯವಿದ್ದರೆ ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ. ಈ ವಿಷಯವನ್ನು ನಾವು ಬಹಳ ಹಿಂದಿನಿಂದಲೂ ಹೇಳುತ್ತಲೇ ಇದ್ದೇವೆ. ಹಾಗೆ ಮಾಡುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ. ಏಕೆಂದರೆ ಅವರಿಗೆ ಇನ್ನೂ ಶಿಕ್ಷೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಬಂಧನ ಖಂಡಿಸಿ ಪ್ರಕರಣ ದಾಖಲಿಸಿದ್ದೇವೆ. ನಮ್ಮ ವಕೀಲರು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿದ್ದಾರೆ. ಇಂದು ರಾತ್ರಿ ಸುಪ್ರೀಂಕೋರ್ಟ್‌ನಿಂದ ತಕ್ಷಣ ವಿಚಾರಣೆಗೆ ನಾವು ಒತ್ತಾಯಿಸುತ್ತೇವೆ ಎಂದರು.

ಇದು ಬಿಜೆಪಿಯ ರಾಜಕೀಯ ಕುತಂತ್ರ. ಕೇಜ್ರಿವಾಲ್​ ಮೋದಿ ಸರ್ಕಾರಕ್ಕೆ ಹೆದರುವುದಿಲ್ಲ. ದೇಶವನ್ನು ಉಳಿಸಲು ಭಗತ್ ಸಿಂಗ್ ನಗುತ್ತಲೇ ನೇಣಿಗೆ ಶರಣಾಗಲು ಒಪ್ಪಿಕೊಂಡಿದ್ದರು. ಈಗ ಸರ್ವಾಧಿಕಾರಿ ಮೋದಿಯಿಂದ ದೇಶವನ್ನು ಮುಕ್ತಗೊಳಿಸಲು ಕೇಜ್ರಿವಾಲ್ ಕೂಡ ತಲೆಗೆ ಬಟ್ಟೆ ಕಟ್ಟಿಕೊಂಡು ಸಿದ್ಧರಾಗಿದ್ದಾರೆ. ಇಂತಹದ್ದಕ್ಕೆಲ್ಲಾ ದೇಶಭಕ್ತ ಕೇಜ್ರಿವಾಲ್ ಹೆದರುವುದಿಲ್ಲ.

ದೆಹಲಿ ಪೊಲೀಸರು ಎಎಪಿ ಶಾಸಕರಾದ ಜರ್ನೈಲ್ ಸಿಂಗ್, ರುತುರಾಜ್ ಝಾ, ಜೈ ಭಗವಾನ್, ಅಬ್ದುಲ್ ರೆಹಮಾನ್ ಅವರನ್ನು ಬಂಧಿಸಿದ್ದಾರೆ. ಈ ಬಂಧನಗಳಿಗೆ ನಾವು ಹೆದರುವುದಿಲ್ಲ, ಕೊನೆಯುಸಿರು ಇರುವವರೆಗೂ ಸರ್ವಾಧಿಕಾರದ ವಿರುದ್ಧ ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.

ಸಚಿವ ಸೌರಭ್ ಭಾರದ್ವಾಜ್ ಅವರು ಮಾತನಾಡಿ, ಪ್ರಮುಖ ನಾಯಕರನ್ನು ಜೈಲಿಗೆ ಹಾಕುವುದು ಬಿಜೆಪಿಯ ಕುತಂತ್ರವಾಗಿದೆ. ಇಡಿ ಸಿಎಂ ನಿವಾಸದ ಮೇಲೆ ದಾಳಿ ನಡೆಸಿ, ಸಂಪೂರ್ಣವಾಗಿ ಪರಿಶೀಲನೆ ನಡೆಸಿತು. ಆದರೆ, ಯಾವುದ ಅಕ್ರಮಗಳು ಕಂಡಬರಲಿಲ್ಲ. ಕೇವಲ 70,000 ರೂ. ನಗದು ಮಾತ್ರ ಸಿಕ್ಕಿದ್ದು, ಅದನ್ನು ಹಿಂದಿರುಗಿಸಿದ್ದಾರೆ.. ಆದರೂ, ಕೇಜ್ರಿವಾಲ್ ಬಂಧನ ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಅಧಿಕಾರದಲ್ಲಿ ಇರುವಾಗಲೇ ಮುಖ್ಯಮಂತ್ರಿಗಳನ್ನು ಇಡಿ, ಸಿಬಿಐ ಬಂಧಿಸುವುದು ಹೊಸದೆನಲ್ಲ. ಈ ಹಿಂದೆ ಹಲವು ಪಕ್ಷದ ಮುಖ್ಯಮಂತ್ರಿಗಳನ್ನು ಬಂಧನ ಮಾಡಲಾಗಿತ್ತು. ಆದರೆ, ಅವರು ಬಂಧನಕ್ಕೂ ಮೊದಲು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಸಿಎಂ ಹುದ್ದೆಯಲ್ಲಿದ್ದಾಗಲೇ ಬಂಧನಕ್ಕೆ ಒಳಗಾದ ಮೊದಲ ನಾಯಕ ಕೇಜ್ರಿವಾಲ್‌ ಆಗಿದ್ದಾರೆ.

ಯಡಿಯೂರಪ್ಪ (ಕರ್ನಾಟಕ), ಮಧು ಕೋಡಾ (ಜಾರ್ಖಂಡ್‌), ಶಿಬು ಸೊರೇನ್‌ (ಜಾರ್ಖಂಡ್‌), ಜಯಲಲಿತಾ (ತಮಿಳಿನಾಡು), ಲಾಲು ಪ್ರಸಾದ್‌ ಯಾದವ್‌ (ಬಿಹಾರ), ಹೇಮಂತ್‌ ಸೊರೇನ್ (ಜಾರ್ಖಂಡ್‌), ಓಂ ಪ್ರಕಾಶ್‌ ಚೌತಾಲಾ (ಹರ್ಯಾಣ), ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ), ಕರುಣಾನಿಧಿ (ತಮಿಳುನಾಡು), ಚರಣ್‌ ಸಿಂಗ್‌ (ಉತ್ತರ ಪ್ರದೇಶ) ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಬಂಧನಕ್ಕೆ ಒಳಗಾಗಿದ್ದರು.

ಏನಿದು ಅಬಕಾರಿ ಹಗರಣ?

ಹಲಿ ಸರ್ಕಾರ 2021-22ನೇ ಸಾಲಿನ ಅಬಕಾರಿ ನೀತಿಯನ್ನು ರೂಪಿಸಿತ್ತು. ಈ ವೇಳೆ 468 ಖಾಸಗಿ ಬಾರ್‌ಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಈ ನೀತಿಯ ಜಾರಿಯ ವೇಳೆ ಹಲವಾರು ಅಕ್ರಮಗಳು ನಡೆದಿವೆ ಎಂದು ಉಪರಾಜ್ಯಪಾಲ ವಿ.ಕೆ.ಸಕ್ಸೇನಾ ಅವರು ತನಿಖೆಗೆ ಶಿಫಾರಸು ಮಾಡಿದ್ದರು. ಅಲ್ಲದೇ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು. ನಂತರ ದೆಹಲಿ ಸರ್ಕಾರವು 2021ರಲ್ಲಿ ಜಾರಿಗೆ ತಂದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಬಿಐ ಹಾಗೂ ಇ.ಡಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ.

ಈ ನೀತಿಯಲ್ಲಿ ಬೆಳಗಿನ ಜಾವ ಮೂರು ಗಂಟೆವರೆಗೆ ಬಾರ್‌ಗಳು ಓಪನ್‌ ಇರುವುದು, ಸುಲಭವಾಗಿ ಲೈಸೆನ್ಸ್‌ ನೀಡುವುದು ಸೇರಿ ಹಲವು ವಿನಾಯಿತಿಯನ್ನ ಖಾಸಗಿ ಲಿಕ್ಕರ್ ಕಂಪನಿಗಳಿಗೆ ನೀಡಲಾಗಿದೆ ಎಂಬ ಆರೋಪ ಕೂಡ ಇದೆ. ಅಲ್ಲದೆ ಜಾರಿ ವೇಳೆ ತಮಗೆ ಬೇಕಾದ ಡೀಲರ್‌ಗಳಿಗೆ ಲೈಸೆನ್ಸ್‌ ನೀಡಲು ಆಪ್‌ 100 ಕೋಟಿ ರೂ. ಲಂಚ ಪಡೆದಿದೆ ಎಂಬ ಆರೋಪವಾಗಿದೆ.

ಈ ಪ್ರಕರಣದ ಮನೀಷ್‌ ಸಿಸೋಡಿಯಾ ಅವರು ಅಬಕಾರಿ ಸಚಿವರಾದ ಕಾರಣ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸುವ ಜತೆಗೆ ಇದುವರೆಗೆ ಹಲವು ಬಾರಿ ವಿಚಾರಣೆ ನಡೆಸಲಾಗಿದೆ. ಈಗ ಕೊನೆಗೆ ಸಿಬಿಐ ಅಧಿಕಾರಿಗಳು ಮನೀಷ್‌ ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ.

SCROLL FOR NEXT