ದೆಹಲಿ ಸಿಎಂ ಕೇಜ್ರಿವಾಲ್
ದೆಹಲಿ ಸಿಎಂ ಕೇಜ್ರಿವಾಲ್ 
ದೇಶ

ನ್ಯಾಯಯುತ ಕಾನೂನು ಪ್ರಕ್ರಿಯೆ ಪ್ರೋತ್ಸಾಹಿಸುತ್ತೇವೆ: ದೆಹಲಿ ಸಿಎಂ ಕೇಜ್ರಿವಾಲ್ ಬಂಧನದ ಬಗ್ಗೆ ಅಮೇರಿಕಾ ಪ್ರತಿಕ್ರಿಯೆ

Srinivas Rao BV

ದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಕುರಿತ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಮೇರಿಕಾ ಹೇಳಿದ್ದು, ತಾನು ನ್ಯಾಯಯುತ ಕಾನೂನು ಪ್ರಕ್ರಿಯೆಯನ್ನು ಪ್ರೋತ್ಸಾಹಿಸುವುದಾಗಿ ತಿಳಿಸಿದೆ.

ಅಮೇರಿಕಾದ ರಾಜ್ಯ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಹೇಳಿಕೆ ಬಗ್ಗೆ ನವದೆಹಲಿಯಲ್ಲಿರುವ ಅಮೇರಿಕಾ ರಾಯಭಾರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕಳೆದ ವಾರ ಜರ್ಮನಿಯ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು ಮತ್ತು ಭಾರತ ಅದನ್ನು ಆಕ್ಷೇಪಿಸಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ. ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಲು ಜರ್ಮನ್ ರಾಯಭಾರಿಯನ್ನು ಭಾರತ ಕರೆಸಿತ್ತು.

"ನವದೆಹಲಿಯಲ್ಲಿರುವ ಜರ್ಮನಿಯ ಡೆಪ್ಯುಟಿ ಚೀಫ್ ಆಫ್ ಮಿಷನ್ ಅವರನ್ನು ಶನಿವಾರ ಕರೆಸಲಾಯಿತು ಮತ್ತು ನಮ್ಮ ಆಂತರಿಕ ವ್ಯವಹಾರಗಳ ಬಗ್ಗೆ ಅವರ ವಿದೇಶಾಂಗ ಕಚೇರಿಯ ವಕ್ತಾರರ ಕಾಮೆಂಟ್‌ಗಳ ಕುರಿತು ನಾವು ಭಾರತದ ತೀವ್ರ ಪ್ರತಿಭಟನೆಯನ್ನು ತಿಳಿಸಿದ್ದೇವೆ. ಅಂತಹ ಹೇಳಿಕೆಗಳು ನಮ್ಮ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ನಮ್ಮ ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವಂತೆ ಎಂಬ ಸಂದೇಶವನ್ನು ನಾವು ನೋಡುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು.

ಅರವಿಂದ್ ಕೇಜ್ರಿವಾಲ್ ಮಾರ್ಚ್ 28 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದಾರೆ. ಕೇಜ್ರಿವಾಲ್ ಅವರ ಬಂಧನದ ತುರ್ತು ವಿಚಾರಣೆಯನ್ನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಮತ್ತು ಅವರ ಬಂಧನವನ್ನು `ಅಕ್ರಮ' ಎಂದು ಬಣ್ಣಿಸಿದ್ದಾರೆ.

SCROLL FOR NEXT