ರಾಹುಲ್ ಗಾಂಧಿ
ರಾಹುಲ್ ಗಾಂಧಿ 
ದೇಶ

ಲೋಕಸಭೆ ಚುನಾವಣೆಯಲ್ಲಿ 'ಮ್ಯಾಚ್ ಫಿಕ್ಸಿಂಗ್ ' ಮಾಡಲು ಪ್ರಧಾನಿ ಮೋದಿ ಯತ್ನ: ರಾಹುಲ್ ಗಾಂಧಿ

Nagaraja AB

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ. ಅಲ್ಲದೇ ಬಿಜೆಪಿ ತನ್ನ ಪ್ರಯತ್ನಗಳಲ್ಲಿ ಯಶಸ್ವಿಯಾದರೆ, ದೇಶದ ಸಂವಿಧಾನವನ್ನು ಬದಲಾಯಿಸಲಾಗುತ್ತದೆ ಮತ್ತು ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಇಲ್ಲಿನ ರಾಮ್‌ಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಆಯೋಜಿಸಿದ 'ಪ್ರಜಾಪ್ರಭುತ್ವ ಉಳಿಸಿ' ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಇದು ಸಾಮಾನ್ಯ ಚುನಾವಣೆಯಲ್ಲ, ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾಗಿದೆ ಎಂದು ಹೇಳಿದರು.

"ಕ್ರಿಕೆಟ್‌ನಲ್ಲಿ ಅಂಪೈರ್‌ಗಳು ಮತ್ತು ನಾಯಕನ ಮೇಲೆ ಒತ್ತಡ ಹೇರಿ, ಆಟಗಾರರನ್ನು ಖರೀದಿಸಿ ಪಂದ್ಯ ಗೆದ್ದರೆ ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರೆ. ನಮ್ಮ ಮುಂದೆ ಲೋಕಸಭೆ ಚುನಾವಣೆ ಇದೆ. ಅಂಪೈರ್‌ಗಳನ್ನು ಆಯ್ಕೆ ಮಾಡಿದವರು ಯಾರು? ಪಂದ್ಯ ಆರಂಭವಾಗುವ ಮುನ್ನ ಇಬ್ಬರು ಆಟಗಾರರನ್ನು ಬಂಧಿಸಲಾಗಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗಾಂಧಿ ಹೇಳಿದರು. ಬಿಜೆಪಿ 400 ಸೀಟುಗಳನ್ನು ಗೆಲ್ಲುವ ಘೋಷಣೆ ಮಾಡುತ್ತಿದೆ. ಆದರೆ, ಇವಿಎಂಗಳು, ಮ್ಯಾಚ್ ಫಿಕ್ಸಿಂಗ್, ವಿರೋಧ ಪಕ್ಷದ ನಾಯಕರ ಮೇಲೆ ಒತ್ತಡ ಮತ್ತು ಮಾಧ್ಯಮಗಳನ್ನು ಖರೀದಿಸದಿದ್ದರೆ ಅವರು 180 ಸ್ಥಾನಗಳನ್ನು ದಾಟಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಕಾಂಗ್ರೆಸ್ ಅತಿದೊಡ್ಡ ವಿರೋಧ ಪಕ್ಷವಾಗಿದೆ ಮತ್ತು ಅದರ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. "ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸಲಾಗಿದೆ. ಇದು ಯಾವ ರೀತಿಯ ಚುನಾವಣೆ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಮೂರು-ನಾಲ್ಕು ಕೋಟ್ಯಾಧಿಪತಿಗಳೊಂದಿಗೆ ಪ್ರಧಾನಿ ಮೋದಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದಾರೆ. ಬಡವರಿಂದ ಸಂವಿಧಾನವನ್ನು ಕಿತ್ತುಕೊಳ್ಳಲು ಇದನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸಂವಿಧಾನ ಜನರ ಧ್ವನಿಯಾಗಿದೆ ಮತ್ತು ಅದು ಮುಗಿದ ದಿನ ಈ ದೇಶವು ಕೊನೆಗೊಳ್ಳುತ್ತದೆ. ಸಂವಿಧಾನ ಹೋದರೆ ಬಡವರ ಹಕ್ಕುಗಳು ಮತ್ತು ಮೀಸಲಾತಿಯೂ ಹೋಗುತ್ತದೆ ಎಂದು ಸಂವಿಧಾನ ತಿದ್ದುಪಡಿ ಮಾಡುವ ಅನಂತ್ ಕುಮಾರ್ ಹೆಗಡೆ ಹೇಳಿಕೆ ಉಲ್ಲೇಖಿಸಿ ರಾಹುಲ್ ಗಾಂಧಿ ಹೇಳಿದರು.

"ಪೊಲೀಸ್, ಸಿಬಿಐ ಮತ್ತು ಇಡಿ ಬೆದರಿಕೆಯಿಂದ ದೇಶವನ್ನು ನಡೆಸಬಹುದು ಎಂದು ಅವರು ಭಾವಿಸುತ್ತಾರೆ. ನೀವು ಮಾಧ್ಯಮಗಳನ್ನು ಖರೀದಿಸಬಹುದು ಮತ್ತು ಅವರನ್ನು ಹತ್ತಿಕ್ಕಬಹುದು ಆದರೆ ಭಾರತದ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ಜನರ ಧ್ವನಿಯನ್ನು ಈ ಜಗತ್ತಿನಲ್ಲಿ ಯಾವುದೇ ಶಕ್ತಿ ಹತ್ತಿಕ್ಕಲು ಸಾಧ್ಯವಿಲ್ಲ. ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮೂಲಕ ಚುನಾವಣೆಯಲ್ಲಿ ಗೆದ್ದು ಸಂವಿಧಾನವನ್ನು ಬದಲಾಯಿಸಿದರೆ ದೇಶ ಉದ್ಧಾರವಾಗುವುದಿಲ್ಲ ಮತ್ತು "ಎಲ್ಲೆಡೆ ಬೆಂಕಿ"ಹತ್ತಿಕೊಳ್ಳಲಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.

SCROLL FOR NEXT