ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಕಲಿ ವೀಡಿಯೊ ಅಪ್‌ಲೋಡ್ ಮತ್ತು ಹಂಚಿಕೆ ಆರೋಪದ ಮೇಲೆ ಕಾಂಗ್ರೆಸ್ ಸದಸ್ಯರೊಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅರುಣ್ ರೆಡ್ಡಿ ಬಂಧಿತ ಆರೋಪಿ. ಈತ ಸಾಮಾಜಿಕ ಜಾಲತಾಣ'ಎಕ್ಸ್' ನಲ್ಲಿ 'ಸ್ಪಿರಿಟ್ ಆಫ್ ಕಾಂಗ್ರೆಸ್' ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ.
ಗೃಹ ಸಚಿವಾಲಯದ (ಎಂಎಚ್‌ಎ) ಅಧೀನದಲ್ಲಿರುವ ಭಾರತೀಯ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (ಐ4ಸಿ) ಶಾ ಅವರ ಹೇಳಿಕೆಗಳನ್ನು ಸೂಚಿಸುವ ನಕಲಿ ವೀಡಿಯೊ ಕುರಿತು ದೂರು ದಾಖಲಿಸಿದ ನಂತರ ದೆಹಲಿ ಪೊಲೀಸರ ವಿಶೇಷ ಸೆಲ್ ಎಫ್‌ಐಆರ್ ದಾಖಲಿಸಿತ್ತು. ತೆಲಂಗಾಣದಲ್ಲಿ ಧಾರ್ಮಿಕ ನೆಲೆಯಲ್ಲಿ ಮುಸ್ಲಿಮರ ಕೋಟಾವನ್ನು ರದ್ದುಗೊಳಿಸುವ ಅವರ ಬದ್ಧತೆಯ ಹೇಳಿಕೆಯನ್ನು ಎಲ್ಲಾ ಮೀಸಲಾತಿಗಳನ್ನು ರದ್ದುಗೊಳಿಸುವಂತೆ ಪ್ರತಿಪಾದಿಸುತ್ತಿದ್ದಾರೆಂಬ ಅರ್ಥ ಬರುವಂತೆ ತಿರುಚಲಾಗಿತ್ತು.
ಅರುಣ್ ರೆಡ್ಡಿ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಸೆಲ್‌ನ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ. ಅಧ್ಯಕ್ಷೆ ಸುಪ್ರಿಯಾ ಶ್ರೀನಾಟೆ ಅಧ್ಯಕ್ಷರಾಗಿದ್ದಾರೆ. ಅರುಣ್ ವಿಡಿಯೋ ಅಪ್ ಲೋಡ್ ಮಾಡಿ, ಹಂಚಿಕೆ ಮಾಡುತ್ತಿದ್ದ. ತನ್ನ ಮೊಬೈಲ್ ಫೋನ್‌ನಿಂದ ಸಾಕ್ಷ್ಯವನ್ನು ಅಳಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ದೆಹಲಿ ಪೊಲೀಸರು ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಅದನ್ನು ವಿಧಿವಿಜ್ಞಾನ ವಿಭಾಗಕ್ಕೆ ತನಿಖೆಗಾಗಿ ಕಳುಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ವೈರಲ್ ಆಗಿದ್ದ ಅಮಿತ್ ಶಾ ಅವರ ನಕಲಿ ವಿಡಿಯೋಗೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಐವರು ತೆಲಂಗಾಣ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಕಾರ್ಯಕರ್ತರನ್ನು ಬಂಧಿಸಿದ್ದರು. ನಂತರ ಪ್ರತಿ ವ್ಯಕ್ತಿ ತಲಾ 10,000 ರೂ. ಮೌಲ್ಯದ ಎರಡು ಶ್ಯೂರಿಟಿ ಗಳ ಷರತ್ತಿನೊಂದಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ. ಮುಂದಿನ ಆದೇಶದವರೆಗೆ ಸೋಮವಾರ ಮತ್ತು ಶುಕ್ರವಾರ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.